ಚೆನ್ನೈ: ಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಡಬ್ಲ್ಯುಐಎ) ಅಧ್ಯಕ್ಷರಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ವಿ ಶಾಂತಾ ಅವರು ಸೋಮವಾರ ನಿಧನರಾಗಿದ್ದಾರೆ.
ಮೂಲಗಳ ಪ್ರಕಾರ ತೀವ್ರ ಉಸಿರಾಟದ ತೊಂದರೆ ಮತ್ತು ಎದೆನೋವಿನಿಂದ ಬಳಲುತ್ತಿದ್ದ ಶಾಂತಾ ಅವರನ್ನು ಚೆನ್ನೈನ ಆಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶಾಂತಾ ಅವರು ತೀವ್ರ ಹೃದಯಾಘಾತದಿಂದಾಗಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಶಾಂತಾ ಅವರು ಮಂಗಳವಾರ ಮುಂಜಾನೆ 3.35 ಕ್ಕೆ ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶಾಂತಾ ಅವರ ದೇಹವನ್ನು ಗಾಂಧಿ ನಗರದ ಹಳೆಯ ಕ್ಯಾನ್ಸರ್ ಸಂಸ್ಥೆಗೆ ಸ್ಥಳಾಂತರಿಸಲಾಗಿದ್ದು. ಇಂದು ಸಂಜೆ 4.30 ಕ್ಕೆ ಬೆಸೆಂಟ್ ನಗರದಲ್ಲಿ ಅಂತ್ರಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.
ಶಾಂತಾ ಅವರು, ಕ್ಯಾನ್ಸರ್ ಆರೈಕೆ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆಗೆ ಹೆಸರುವಾಸಿಯಾಗಿದ್ದರು. ಮಾರ್ಚ್ 11, 1927 ರಂದು ಜನಿಸಿದ ಡಾ. ಶಾಂತಾ ಅವರು, ಕ್ಯಾನ್ಸರ್ ಗುಣಪಡಿಸುವಿಕೆ, ತಡೆಗಟ್ಟುವಿಕೆ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಡಾ. ಶಾಂತಾ 1949 ರಲ್ಲಿ ಚೆನ್ನೈನ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ ಅವರು 1952 ರಲ್ಲಿ ಡಿಜಿಒ ಮತ್ತು 1955 ರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಡಿ ಮಾಡಿದರು. ಹಿರಿಯ ಆಂಕೊಲಾಜಿಸ್ಟ್ ಆಗಿದ್ದ ಶಾಂತಾ ಅವರು ಪದ್ಮಭೂಷಣ, ಪದ್ಮಶ್ರೀ, ಪದ್ಮವಿಭೂಷಣ್, ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಶಾಂತಾ ಅವರು 1995 ರಿಂದ ಕ್ಯಾನ್ಸರ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ.