ಕಾಸರಗೋಡು: ಕಾಸರಗೋಡು ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಯಕ್ಷ ಪುತ್ಥಳಿ ಬೊಂಬೆಮನೆ ಟ್ರಸ್ಟ್ ಉದ್ಘಾಟನೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶುಕ್ರವಾರ ನೆರವೇರಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಕ್ಷರ ಮತ್ತು ಆಕಾಶ ಸಾಹಿತ್ಯ ಸಮೀಕ್ಷೆ ಕೃತಿಯನ್ನು ಕಣ್ಣೂರು ವಿ.ವಿ.ಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಬಿಡುಗಡೆಗೊಳಿಸಿದರು. ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯದ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರು ಕೃತಿಯನ್ನು ಪರಿಚಯಿಸಿದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಗೌರವಾಧ್ಯಕ್ಷೆ ಗಿರಿಜಾ ವೆಂಕಟಕೃಷ್ಣಯ್ಯ ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ.ರಮೇಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಪಂದನ ಕಾಸರಗೋಡು ಇದರ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಬೊಂಬೆಯಾಟ ಕಲಾವಿದೆ ಸ್ವಾತಿ ಕೆ.ವಿ.ಸರಳಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಮ ದರ್ಶನ ಯಕ್ಷಗಾನ ಬೊಂಬೆಯಾಟ ಜರಗಿತು.