ತಿರುವನಂತಪುರ: ರಾಜ್ಯದಲ್ಲಿ ಪಕ್ಷಿ ಜ್ವರ ದೃಢಪಡಿಸಲಾಗಿದೆ. ಆಲಪ್ಪುಳ ಜಿಲ್ಲೆಯ ಕುಟ್ಟನಾಡು ಪ್ರದೇಶಗಳು, ಕೋಟ್ಟಯಂ ಜಿಲ್ಲೆಯ ನೀಂದೂರಿನಲ್ಲಿ ಎಚ್ -5 ಎನ್ -8 ವೈರಾಣು ಪತ್ತೆಯಾಗಿದೆ. ಈ ಮೊದಲು, ಬಾತುಕೋಳಿಗಳು ನಿರಂತರವಾಗಿ ಸಾಯುತ್ತಿರುವುದರಿಂದ ನಡೆಸಲಾದ ವೈದ್ಯಕೀಯ ಪರೀಕ್ಷೆಗಳಲ್ಲಿ ಪಕ್ಷಿ ಜ್ವರದ ವೈರಸ್ ನ ಇರುವಿಕೆಯನ್ನು ಪತ್ತೆಹಚ್ಚಲಾಗಿತ್ತು. ಭೋಪಾಲ್ ನ ಪ್ರಯೋಗಾಲಯಕ್ಕೆ ಕಳಿಸಲಾದ ಮಾದರಿಗಳ ಶೋಧದ ವೇಳೆ ಎಂಟು ಸ್ಯಾಂಪಲ್ ಗಳಲ್ಲಿ ಐದರಲ್ಲಿ ಪಕ್ಷಿ ಜ್ವರದ ವೈರಸ್ ಇರುವುದು ದೃಢಪಟ್ಟಿದೆ ಎಂದು ಸಚಿವ ಕೆ ರಾಜು ತಿಳಿಸಿರುವರು.
ವೈರಸ್ ರೂಪಾಂತರಗೊಂಡರೆ, ಅದು ಮನುಷ್ಯರಿಗೆ ಹರಡಬಹುದು. ಆದರೆ ಇದು ಇನ್ನೂ ಮನುಷ್ಯರಿಗೆ ಹರಡಿಲ್ಲ. ವೈರಸ್ ಏಕಾಏಕಿ ವ್ಯಾಪಕಗೊಂಡರೆ ಕೇಂದ್ರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಈಗಾಗಲೇ ಅಲ್ಲಿಯ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಪಕ್ಷಿ ಜ್ವರದ ಜಾಗ್ರತೆಯ ಎಚ್ಚರಿಕೆ ನೀಡಿದ್ದಾರೆ. ಸೋಂಕಿತ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ಪಕ್ಷಿಗಳನ್ನು ಸಾಮೂಹಿಕವಾಗಿ ಕೊಲ್ಲುವ ನಿರ್ಧಾರ ಕೈಗೊಳ್ಳಲಾಗಿದೆ. ಸುಮಾರು 48,000 ಪಕ್ಷಿಗಳು ಸಾಯುವ ನಿರೀಕ್ಷೆಯಿದೆ.
ಕಳೆದ ವರ್ಷ ಕೋಝಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ಪಕ್ಷಿ ಜ್ವರ ದೃಢಪಟ್ಟಾಗ, ಈ ಪ್ರದೇಶದ ಎಲ್ಲಾ ಪಕ್ಷಿಗಳನ್ನೂ ಕೊಲ್ಲಲಾಗಿತ್ತು. ವೈರಸ್ ಇತರ ಪ್ರದೇಶಗಳಿಗೆ ಹರಡದಂತೆ ಈ ಮೂಲಕ ತಡೆಹಿಡಿಯಲಾಗುತ್ತದೆ ಎಂದು ಅಧಿಕೃತರು ತಿಳಿಸಿದ್ದಾರೆ.