ಕಾಸರಗೋಡು: ಪುಲ್ಲೂರು ಗ್ರಾಮದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಟ್ರಸ್ಟ್ ನಿರ್ಮಿಸಿ ನೀಡಿರುವ ವಸತಿಗಳನ್ನು ನಿರ್ಮಿಸಿರುವುದು ಭೂಮಿಯ ಹಕ್ಕು ಪತ್ರ ನೀಡಿರುವ ಜಾಗದಲ್ಲಿ ಅಲ್ಲ ಎಂಬುದು ಕಂದಾಯ ಇಲಾಖೆಯ ಪುನರ್ ತಪಾಸಣೆಯಲ್ಲಿ ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರ ಸಮಗ್ರ ಅಭಿವೃಧ್ಧಿ ಖಚಿತಪಡಿಸಬೇಕಿದ್ದರೆ ಭೂರಹಿತರಾಗಿರುವವರಿಗೆ ಜಾಗ ಮತ್ತು ಮನೆ ನಿರ್ಮಿಸಿ ನೀಡಿ ಅವರಿಗೆ ಜೀವನಮಾರ್ಗ ಖಚಿತಪಡಿಸಬೇಕು ಎಂಬ ರಾಜ್ಯ ಸರ್ಕಾರದ ನೀತಿಯ ಹಿನ್ನೆಲೆಯಲ್ಲಿ2015ರಲ್ಲಿ ಪುಲ್ಲೂರು ಗ್ರಾಮದಲ್ಲಿ 492/1 ಸರ್ವೇ ನಂಬ್ರದಲ್ಲಿ ಅರ್ಹರಾಗಿರುವ 30 ಮಂದಿಗೆ ತಲಾ 10 ಸೆಂಟ್ಸ್ ಭೂಮಿ ಮಂಜೂರು ಮಾಡಲಾಗಿತ್ತು. ಈ ಜಾಗದಲಿ ಪ್ರಾಯೋಜಕತ್ವದ ಮೂಲಕ ಮನೆಗಳನ್ನು ನಿರ್ಮಿಸಿ ನೀಡುವುದಾಗಿ ಟ್ರಸ್ಟ್ ಖಚಿತಪಡಿಸಿದ್ದ ಹಿನ್ನೆಲೆಯಲ್ಲಿ ಭೂಹಕ್ಕು ಪತ್ರ ನೀಡಲಾಗಿತ್ತು. ಆದರೆ ಕಂದಾಯ ಇಲಾಖೆ ನಡೆಸಿದ್ದ ಪುನರ್ ತಪಾಸಣೆಯಲ್ಲಿ ಟ್ರಸ್ಟ್‍ಮನೆ ನಿರ್ಮಿಸಿ ನೀಡಿರುವುದು ಭೂಹಕ್ಕು ಪ್ರಕಾರದ ಜಾಗದಲ್ಲಿ ಅಲ್ಲ ಎಂಬುದು ಪತ್ತೆಯಾಗಿದೆ. ಸದ್ರಿ ಮನೆ ನಿರ್ಮಿಸಿರುವ ಜಾಗಗಳಲ್ಲಿ ವಸತಿ ಹೂಡಿರುವವರಿಗೆ ಮನೆ ನಂಬ್ರ, ಕುಡಿಯುವ ನೀರು, ವಿದ್ಯುತ್‍ಸಹಿತ ಸೌಲಭ್ಯ ಮಂಜೂರಾಗಬೇಕಿದ್ದರೆ ಅವರ ಹೆಸರಲ್ಲಿ ಜಾಗ ವಿಂಗಡಿಸಿ ವಿತರಿಸಬೇಕಿದೆ. ಒಮ್ಮೆ ಭೂಹಕ್ಕು ಪತ್ರ ಪ್ರಕಾರದ ಜಾಗ ಮಂಜೂರು ಮಾಡಿರುವ ಮಂದಿಗೆ ಮತ್ತೆ ಜಾಗ ವಿಂಗಡಿಸಿ ನೀಡುವುದು ಅಸಾಧ್ಯ ಎಂದು ಜಿಲ್ಲಾಧಿಕಾರಿ ನುಡಿದರು. ಆದಕಾರಣ ಹಿಂದೆ ನೀಡಿರುವ ಭೂಹಕ್ಕು ಪತ್ರವನ್ನು ರದ್ದುಗೊಳಿಸಬೇಕಾಗುತ್ತದೆ. ತದನಂತರ ಮನೆ ನಿರ್ಮಿಸಿರುವ ಜಾಗವನ್ನು ಭೂಹಕ್ಕುಪತ್ರ ರೂಪದಲ್ಲಿ ವಿಂಗಡಿಸಿ ನೀಡಬೇಕಾಗಿ ಬರುತ್ತದೆ. ಈ ನಿಟ್ಟಿನಲ್ಲಿ ಕ್ರಮ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಂದಾಯ ಇಲಾಖೆ ಜವಾಬ್ದಾರಿ:
ಕಂದಾಯ ಇಲಾಖೆ ತೋರಿಸಿರುವ ಜಾಗದಲ್ಲಿ ಟ್ರಸ್ಟ್ ಎಂಟು ಕೋಟಿಗೂ ಹೆಚ್ಚು ಮೊತ್ತ ಬಳಸಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮನೆ ನಿರ್ಮಿಸಿಕೊಟ್ಟಿದ್ದು, ನಾಲ್ಕು ವರ್ಷದ ನಂತರ ಜಾಗ ನೀಡಿಕೆಯಲ್ಲಿ ಲೋಪವುಂಟಾಗಿದ್ದರೆ, ಇದಕ್ಕೆ ಕಂದಾಯ ಇಲಾಖೆ ಜವಾಬ್ದಾರರಾಗಬೇಕು. ಈ ಬಗ್ಗೆ ಟ್ರಸ್ಟ್ ಭಾಗದಿಂದ ಯಾವುದೇ ಲೋಪವುಂಟಾಗಿಲ್ಲ. ಬಡ ಸಂತ್ರಸ್ತರಿಗಾಗಿ ನಿರ್ಮಿಸಲಾದ 45ಮನೆಗಳಲ್ಲಿ 22ಮನೆಗಳ ಕೀಲಿಕೈ ಖುದ್ದು ಮುಖ್ಯಮಂತ್ರಿ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದು, ಉಳಿದ 23ಮನೆಗಳ ಕೀಲಿಕೈ ಹಸ್ತಾಂತರ ನಡೆಸುವಲ್ಲಿ ಉಂಟಾದ ವಿಳಂಬದ ಬಗ್ಗೆ ಕೇರಳ ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ನೋಟೀಸು ರವಾನೆಯಾಗಿತ್ತು. ಇದೀಗ ಜಾಗದ ಹೆಸರಲ್ಲಿ ಲೋಪವುಂಟಾಗಿರುವುದಾಗಿ ತಿಳಿಸುತ್ತಿರುವ ಜಿಲ್ಲಾಧಿಕಾರಿ ಧೋರಣೆ ಸರಿಯಲ್ಲ ಎಂದು ಟ್ರಸ್ಟ್ ಸ್ಥಾಪಕ ಹಾಗೂ ಮುಖ್ಯ ನಿರ್ದೇಶಕ ಕೆ.ಎನ್ ಆನಂದ ಕುಮಾರ್" ತಿಳಿಸಿದ್ದಾರೆ.