ನವದೆಹಲಿ: ಕೃಷಿ ಕಾನೂನು ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ರ್ಯಾಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ರೈತರ ಪರ ಸಂಘಟನೆಗಳು ಘೋಷಣೆ ಮಾಡಿವೆ.
ಈ ಕುರಿತಂತೆ ಮಾತನಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ವಕ್ತಾರರು, ತತ್ ಕ್ಷಣದಿಂದಲೇ ಟ್ರಾಕ್ಟರ್ ರ್ಯಾಲಿಯನ್ನು ನಾವು ಹಿಂದಕ್ಕೆ ಪಡೆದಿದ್ದೇವೆ. ಕೂಡಲೇ ರೈತರು ಪ್ರತಿಭಟನಾ ನಿರತ ಪ್ರದೇಶಕ್ಕೆ ವಾಪಸ್ ಆಗಬೇಕು. ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರೆಯಲಿದೆ. ಮುಂದಿನ ನಿರ್ಧಾರದ ಕುರಿತು ರೈತ ಮುಖಂಡರೊಂದಿಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಕೆಂಪುಕೋಟೆ ಮೇಲೆ ಅನ್ಯ ಧ್ವಜ ಹಾರಿಸಿದ ರೈತರು:
ದೆಹಲಿಯಲ್ಲಿ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ರಾಷ್ಟ್ರ ರಾಜಧಾನಿ ಪ್ರಕ್ಷುಬ್ಧಗೊಂಡಿತ್ತು. ಈ ನಡುವೆ ಕೆಂಪುಕೋಟೆಯಲ್ಲಿ ಪ್ರತಿಭಟನಾ ನಿರತ ರೈತರು ಸಿಖ್ ಧ್ವಜ ಹಾರಿಸಿದ್ದಕ್ಕೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ, ತಮಗೂ ಈ ಹಿಂಸಾಚಾರಕ್ಕೂ ಸಂಬಂಧವಿಲ್ಲ. ರೈತರ ಟ್ರಾಕ್ಟರ್ ರ್ಯಾಲಿ ವೇಳೆ ಕೆಲ ಸಮಾಜ ವಿದ್ರೋಹಿ ವ್ಯಕ್ತಿಗಳು ನುಸುಳಿ ಪ್ರತಿಭಟನೆಯ ಹಾದಿ ತಪ್ಪಿಸಿದ್ದಾರೆ. ನಮ್ಮ ಪ್ರತಿಭಟನೆ ಶಾಂತಿಯುತವಾಗಿಯೇ ಇತ್ತು. ಆದರೆ ಕೆಲವು ಸಮಾಜಘಾತುಕ ಶಕ್ತಿಗಳು ನಮ್ಮ ನಡುವೆ ಸೇರಿಕೊಂಡು ಈ ಹಿಂಸಾಚಾರ ನಡೆದಿದೆ. ಶಾಂತಿ ಎಂದಿಗೂ ಅತಿ ದೊಡ್ಡ ಶಕ್ತಿ ಹಾಗೂ ನಿಯಮಗಳ ಉಲ್ಲಂಘನೆ ಚಳುವಳಿಗೆ ಒಳಿತಲ್ಲ ಎಂದು ಹೇಳಿದೆ.
ದೆಹಲಿಯಲ್ಲಿ ರೈತರು–ಪೊಲೀಸರ ಘರ್ಷಣೆ:
ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಐಟಿಒ ಬಳಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಲಾಠಿಚಾರ್ಜ್ ವೇಳೆ ಹಲವರು ಗಾಯಗೊಂಡಿದ್ದಾರೆ. ನಿಗದಿತ ಮಾರ್ಗ ಬದಲಿಸಿ ರೈತರ ಟ್ರಾಕ್ಟರ್‌ಗಳು ಬೇರೆ ಕಡೆ ತೆರಳಲು ಮುಂದಾದಾಗ ಪೊಲೀಸರು ತಡೆದಿದ್ದು, ಈ ಸಂದರ್ಭ ಘರ್ಷಣೆ ಸಂಭವಿಸಿದೆ. ಕೆಲ ರೈತರು ಪೂರ್ವನಿರ್ಧರಿತ ಮಾರ್ಗದಲ್ಲಿ ತೆರಳಲು ನಿರಾಕರಿಸಿ ದೆಹಲಿಯ ಐಟಿಒ ಕಡೆಗೆ ತಲುಪಿದ್ದರು. ಪೊಲೀಸ್ ಕೇಂದ್ರ ಕಚೇರಿ ಬ್ಯಾರಿಕೇಡ್ ಹಾಕಿದ ಪೊಲೀಸರು, ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸುವ ಮೂಲಕ ತಿಲಕ್ ಬ್ರಿಡ್ಜ್ ಕಡೆಗೆ ತೆರಳದಂತೆ ತಡೆದರು. ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಐಟಿಒ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಲುಟೆನ್ಸ್, ಚಿಂತಮಣಿ ಚೌಕ್ ಸೇರಿ ಹಲವೆಡೆ ಹಿಂಸಾಚಾರದ ಬಗ್ಗೆ ವರದಿಯಾಗಿದೆ. ಅಪ್ಸರಾ ಬಾರ್ಡರ್ ಕಡೆಗೆ ರೈತರ ರ‍್ಯಾಲಿಗೆ ತೆರಳಲು ಮಾರ್ಗ ನಿಗದಿ ಮಾಡಲಾಗಿತ್ತು. ಆದರೆ, ರೈತರು ಚಿಂತಮಣಿ ಚೌಕ್ ಬಳಿ ಬ್ಯಾರಿಕೇಡ್ ಮುರಿದು ನುಗ್ಗಿದ್ದರಿಂದ ಗುಂಪು ಚದುರಿಸಲು ಪೊಲೀಸರು ಲಾಠಚಾರ್ಜ್ ನಡೆಸಿದ್ದಾರೆ. ಬಳಿಕ ಅಶ್ರುವಾಯು ಪ್ರಯೋಗಿಸಿದ್ದಾರೆ.
ದೆಹಲಿಯ ಹಲವೆಡೆ ಇಂಟರ್‌ನೆಟ್ ಸ್ಥಗಿತ:
ರೈತರ ಪ್ರತಿಭಟನೆ ಕಾವೇರುತ್ತಿದ್ದಂತೆ ಪೊಲೀಸರು ಕೆಂಪು ಕೋಟೆಯಲ್ಲಿ ಸೇರಿದ್ದವರನ್ನು ಹೊರಗೆ ಕಳುಹಿಸಿದ್ದಾರೆ, ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ್ದಾರೆ. ಗೊಂದಲಮಯ ವಾತಾವರಣ ನಿರ್ಮಾಣವಾಗಿ ಕಲ್ಲು ತೂರಾಟ ಸಹ ನಡೆದಿದೆ. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗುತ್ತಿದ್ದರೆ, ಪೊಲೀಸರು ಅಶ್ರುವಾಯು ಸಿಡಿಸುವ ಮೂಲಕ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿ ಭಾಗಗಳು ಸೇರಿದಂತೆ ಕೆಲ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ. ಬಹುತೇಕ ಮೆಟ್ರೊ ಮಾರ್ಗಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಪ್ರವೇಶಿಸುವ ಹಾಗೂ ಹೊರ ಹೋಗುವ ದ್ವಾರಗಳನ್ನು ಮುಚ್ಚಲಾಗಿದೆ. ನಾಂಗಲೋಯ್ ಸಮೀಪ ಟ್ರ್ಯಾಕ್ಟರ್‌ಗಳನ್ನು ಮುಂದೆ ಸಾಗಿಸಲು ಪ್ರಯತ್ನಿಸಿದವರ ಮೇಲೆ ಪೊಲೀಸರು ಲಾಠಿ ಬೀಸಿದರೆ, ಪ್ರತಿಭಟನಾ ನಿರತರು ಪೊಲೀಸರ ಮೇಲೆ ಟ್ರ್ಯಾಕ್ಟರ್ ನುಗ್ಗಿಸುವ ಪ್ರಯತ್ನ ಮಾಡಿದರು.