ಕೇಪ್ಟೌನ್: ಕರೊನಾ ವೈರಸ್ ಮಹಾಮಾರಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು, ಸುಧಾರಿಸಿಕೊಳ್ಳುತ್ತಿರುವ ಸಮಯದಲ್ಲಿ ಮಾರಣಾಂತಿಕ ಎಬೋಲಾ ಕಾಯಿಲೆಯನ್ನು ಪತ್ತೆಹಚ್ಚಿದ್ದ ವೈದ್ಯರೊಬ್ಬರು ನೀಡಿರುವ ಎಚ್ಚರಿಕೆ ಮನುಕುಲವನ್ನು ಮತ್ತೊಮ್ಮೆ ಚಿಂತೆಗೆ ದೂಡುವಂತಿದೆ. ಡಿಸೀಸ್ ಎಕ್ಷ್ (Disease X) ರೋಗವು ಮಾನವ ಕುಲವನ್ನೇ ನಾಶ ಮಾಡಲಿದೆ ಎಂದು ತಿಳಿಸಿದ್ದಾರೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಇನ್ಸ್ಟಿಟ್ಯೂಟ್ ನ್ಯಾಷನಲ್ ಪೌರ್ ಲಾ ರೆಚೆರ್ಚೆ ಬಯೋಮೆಡಿಕೇಲ್ನ ಜನರಲ್ ಡೈರೆಕ್ಟರ್, ಕಾಂಗೋಲೀಸ್ನ ಸೂಕ್ಷ್ಮ ಜೀವಶಾಸ್ತ್ರಜ್ಞ ಹಾಗೂ ಪ್ರಾಧ್ಯಪಕರಾದ ಜೀನ್-ಜಾಕ್ವೆಸ್ ಮುಯೆಂಬೆ ಟಾಮ್‌ಫಮ್ ಅವರು 1976ರಲ್ಲಿ ಎಬೋಲಾ ವೈರಸ್ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದರು. ಕರೊನಾ ಬೆನ್ನಲ್ಲೇ ಎಚ್ಚರಿಕೆ ನೀಡಿರುವ ಮಯೆಂಬೆ ಟಾಮ್‌ಫಮ್, ಅಸಂಖ್ಯಾತ ಹೊಸ ವೈರಸ್ಗಳನ್ನು ಮಾನವ ಕುಲ ಮುಂದೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಹೊಸ ಮತ್ತು ಮಾರಣಾಂತಿಕ ವೈರಸ್‌ಗಳ ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಲ್ಲಿ ಸ್ಫೋಟಗೊಳ್ಳಲಿವೆ. ಇಂದು ನಾವು ಹೊಸ ಹೊಸ ರೋಗಕಾರಕಗಳು ಕಾಣಿಸಿಕೊಳ್ಳುವಂತಹ ಜಗತ್ತಿನಲ್ಲಿ ಇದ್ದೇವೆ. ಇವುಗಳು ಮಾನವೀಯತೆ ಅಪಾಯ ತಂದೊಡ್ಡಲಿವೆ ಎಂದು ಕಳವಳ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿ, ಭವಿಷ್ಯದ ಸಾಂಕ್ರಾಮಿಕಗಳು ಕೋವಿಡ್-19ಗಿಂತ ಅತ್ಯಂತ ಕೆಟ್ಟದಾಗಿರಲಿವೆ ಮತ್ತು ಪ್ರಪಂಚದ ವಿನಾಶಕಾರಿಯಾಗಿರಬಹುದು ಎಂದರು.
ಕೇಂದ್ರ ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಹೆಸರೇಳಲು ಬಯಸದ ರೋಗಿಯೊಬ್ಬನಲ್ಲಿ ರಕ್ತಸ್ರಾವ ಜ್ವರದ ಆರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಆತನಿಗೆ ಎಬೋಲಾ ಪರೀಕ್ಷೆ ಮಾಡಲಾಗಿದ್ದು, ನೆಗಿಟಿವ್ ವರದಿ ಬಂದಿರುವುದರಿಂದ ಆತನನ್ನು ಡಿಸೀಸ್ ಎಕ್ಷ್ ರೋಗದ ಶೂನ್ಯ ರೋಗಿ (ಮೊದಲು ಸೋಂಕು ತಗಲುವ ವ್ಯಕ್ತಿಯನ್ನು ಇಂಗ್ಲಿಷ್ನಲ್ಲಿ ಜೀರೋ ಪೇಷೆಂಟ್ ಎಂದು ಕರೆಯಲಾಗುತ್ತದೆ) ಎಂದು ಹೇಳಲಾಗಿದೆ.
ಈ ಹೊಸ ರೋಗವು ಕೋವಿಡ್-19ಗಿಂತ ಹೆಚ್ಚು ವೇಗವಾಗಿ ಹರಡಲಿದೆ. ಅಲ್ಲದೆ. ಎಬೋಲಾದಷ್ಟೇ ಶೇ. 50ರಿಂದ 90ರಷ್ಟು ಮರಣ ಪ್ರಮಾಣ ಇರಲಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ ಡಿಸೀಸ್ ಎಕ್ಷ್ ಸದ್ಯ ಕಾಲ್ಪನಿಕವಾಗಿದ್ದರೂ ಒಂದು ವೇಳೆ ಸಂಭವಿಸಿದ್ದಲ್ಲಿ ಇಡೀ ಜಗತ್ತನೇ ನಾಶ ಮಾಡಲಿದೆ.
ಮುಯೆಂಬೆ ಟಾಮ್‌ಫಮ್ ಅವರು ಯುವ ಸಂಶೋಧಕರಾಗಿದ್ದಾಗ ಸಂತ್ರಸ್ತನೊಬ್ಬನ ರಕ್ತದ ಮಾದರಿಯನ್ನು ಪರೀಕ್ಷಿಸಿ ನಿಗೂಢ ಕಾಯಿಲೆಯನ್ನು ಪತ್ತೆಹಚ್ಚಿದ್ದರು. ಬಳಿಕ ಅದಕ್ಕೆ ಎಬೋಲಾ ಎಂದು ನಾಮಕರಣ ಮಾಡಿದ್ದರು. ಎಬೋಲಾ ರಕ್ತಸ್ರಾವ ಉಂಟುಮಾಡುವ ವೈರಸ್ ಆಗಿದ್ದು, ಮೊದಲು ಪತ್ತೆಯಾದಾಗ ಶೇ. 88ರಷ್ಟು ರೋಗಿಗಳು ಮತ್ತು ಯಂಬುಕು ಮಿಷನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶೇ. 80 ರಷ್ಟು ಸಿಬ್ಬಂದಿಯನ್ನು ಬಲಿಪಡೆದುಕೊಂಡಿದೆ.
ರಕ್ತದ ಬಾಟಲುಗಳನ್ನು ಬೆಲ್ಜಿಯಂ ಮತ್ತು ಯುಎಸ್ಗೆ ಕಳುಹಿಸಿದಾಗ ಅಲ್ಲಿನ ವಿಜ್ಞಾನಿಗಳು ಹುಳುವಿನ ಆಕಾರದ ವೈರಸ್ ಪತ್ತೆ ಮಾಡಿದ್ದರು. ಇದೇ ಆಧಾರದ ಮೇಲೆ ಮಾತನಾಡಿರುವ ಮುಯೆಂಬೆ ಟಾಮ್‌ಫಮ್, ಮುಂದಿನ ದಿನಗಳಲ್ಲಿ ಪ್ರಾಣಿಗಳಿಂದ ಮಾನವನಿಗೆ ಅನೇಕ ರೋಗಗಳು ಹರಡಲಿವೆ ಎಂದು ಎಚ್ಚರಿಸಿದ್ದಾರೆ.
ಹಳದಿ ಜ್ವರ, ವಿವಿಧ ರೀತಿಯ ಶೀತಜ್ವರ, ರೇಬಿಸ್ ಮತ್ತು ಲೈಮ್ ರೋಗಗಳಂತಹ ಅನೇಕ ರೋಗಗಳು ಪ್ರಾಣಿಗಳಿಂದಲೇ ಮಾನವನಿಗೆ ಹರಡಿವೆ. ಅದರಲ್ಲೂ ದಂಶಕಗಳು ಅಥವಾ ಕೀಟಗಳ ಮೂಲಕವೇ ಹರಡಿವೆ. ಸದ್ಯ ಹೆಚ್ಚುತ್ತಿರುವ ವೈರಸ್‌ಗಳ ಸಂಖ್ಯೆಗೆ ಪ್ರಾಣಿಗಳ ಆವಾಸಸ್ಥಾನಗಳ ನಾಶ ಮತ್ತು ವನ್ಯಜೀವಿ ವ್ಯಾಪಾರವೇ ಕಾರಣ ಎಂದು ತಜ್ಞರು ಎಚ್ಚರಿಸಿದ್ದಾರೆ.
ನೈಸರ್ಗಿಕ ಆವಾಸಸ್ಥಾನಗಳು ಕಣ್ಮರೆಯಾಗುತ್ತಿದ್ದಂತೆ, ಇಲಿಗಳು, ಬಾವಲಿಗಳು ಮತ್ತು ಕೀಟಗಳಂತಹ ಪ್ರಾಣಿಗಳು ಮಾತ್ರ ಉಳಿದುಕೊಂಡಿದ್ದು, ದೊಡ್ಡ ಪ್ರಾಣಿಗಳು ನಾಶವಾಗುತ್ತಿವೆ. ಇನ್ನು ಕರೊನಾ ಮೊದಲಿಗೆ ಚೀನಾದಲ್ಲಿ ಸ್ಫೋಟಗೊಂಡು ಬಾವಲಿ ಮೂಲಕ ಮಾನವನಿಗೆ ಹರಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ನಮ್ಮ ಜೀವನ ಕ್ರಮದ ಮೇಲೆ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನತ್ತಾರೆ ತಜ್ಞರು.