ಬದಿಯಡ್ಕ: ಕೊರೊನಾ ಸಂಕಷ್ಟದಿಂದ ಕಂಗೆಟ್ಟಿರುವ ಇಂದಿನ ಸಂದರ್ಭದಲ್ಲಿ ದಿಕ್ಕೆಟ್ಟಿರುವ ಕಲಾವಿದರು, ಕಲಾಪ್ರೇಮಿಗಳಿಗೆ ಒಂದಷ್ಟು ರಸಾಸ್ವಾಧನೆಗೆ ಕೊಲ್ಲಂಗಾನದಲ್ಲಿ ಆಯೋಜಿಸಲಾಗಿರುವ ಯಕ್ಷಪಂಚಕ ಯಶಸ್ವಿಯಾಗಿದೆ. ಮನೆಯಂತಹ ವಾತಾವರಣದಲ್ಲಿ ಎಲ್ಲರ ಮನಸ್ಸುಗಳನ್ನು ಸೆಳೆಯುವ ಆತಿಥ್ಯ ನೀಡುವ ಕೊಲ್ಲಂಗಾನದ ಯಕ್ಷ ಪಯಣ ಅಪೂರ್ವವಾದುದು ಎಂದು ಹಿರಿಯ ಯಕ್ಷಗಾನ ಕಲಾವಿದ, ಗುರು ರವಿ ಅಲೆವೂರಾಯ ವರ್ಕಾಡಿ ಅವರು ತಿಳಿಸಿದರು.
ಶ್ರೀನಿಲಯ ಕೊಲ್ಲಂಗಾನದಲ್ಲಿ ದಿ.ಬ್ರಹ್ಮಶ್ರೀ ಅನಂತಪದ್ಮನಾಭ ಉಪಾಧ್ಯಾಯರ ಸಂಸ್ಮರಣಾರ್ಥ ಕಳೆದ ಐದು ದಿನಗಳಿಂದ ಆಯೋಜಿಸಲಾಗಿದ್ದ ಯಕ್ಷಪಂಚಕ ಸಮಾರಂಭದ ಕೊನೆಯ ದಿನವಾದ ಮಂಗಳವಾರ ರಾತ್ರಿ ನಡೆದ ಸಮಾರಂಭದಲ್ಲಿ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
ಹಿರಿಯರ ಮಾರ್ಗದರ್ಶನ, ಅವರು ಕಟ್ಟಿದ ಕನಸುಗಳನ್ನು ಪೋಣಿಸಿ ಬದುಕಿದಾಗ ಬದುಕು ಸಾರ್ಥಕವಾಗುತ್ತದೆ. ಸಾಧಕರ ಸಂಸ್ಮರಣೆಯ ಮೂಲಕ ನಮ್ಮ ಕರ್ತವ್ಯತತ್ಪರತೆಯನ್ನು ಪುನಃರಪಿ ನೆನಪಿಸಿ ಲಕ್ಷ್ಯದತ್ತ ಸಾಗುವಲ್ಲಿ ಬಲ ನೀಡುತ್ತದೆ. ಕೊರೊನಾ ಮಹಾಮಾರಿಯ ಮಧ್ಯೆ ಅದು ಕಲಿಸಿದ ಪಾಠಗಳೊಂದಿಗೆ ಮುನ್ನಡೆಯುವುದನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ಯಕ್ಷಪಂಚಕದಂತಹ ಪರಂಪರೆಯ ನೆನಪುಗಳು ಬೆಳಕಾಗುತ್ತದೆ ಎಂದರು.
ಬೆಳ್ಳೂರು ಮಹಾವಿಷ್ಣು ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ, ಸಮಾಜಸೇವಕ, ಧಾರ್ಮಿಕ ಮುಂದಾಳು ಎ.ಬಿ.ಗಂಗಾಧರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಖ್ಯಾತ ಜ್ಯೋತಿಷಿ, ಬ್ರಹ್ಮಶ್ರೀ ಕೃಷ್ಣಮೂರ್ತಿ ಪುದುಕೋಳಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಸಮ್ಯಕ್ ಸ್ಮರಣೆಯ ಮೂಲಕ ಭವಿಷ್ಯವನ್ನು ಸಮರ್ಥವಾಗಿ ಕಟ್ಟಿಕೊಳ್ಳಲು ಬುನಾದಿಯಾಗುವುದು. ಆಧುನಿಕ ಚಿಂತನೆಗಳ ಭರಾಟೆಯ ಮಧ್ಯೆ ಪರಂಪರೆಯನ್ನು ಉಳಿಸಿ ಬೆಳೆಸುವ ಚಟುವಟಿಕೆಗಳಿಗೆ ಸಜ್ಜನ ಜನ ಬೆಂಬಲ ನಿರಂತರವಾಗಿರಲಿ ಎಂದು ತಿಳಿಸಿದರು.
ಮಾನ್ಯ ಜ್ಞಾನೋದಯ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ನವೀನಚಂದ್ರ ಮಾನ್ಯ, ಸಾಹಿತ್ಯ, ಸಾಂಸ್ಕøತಿಕ ಪೋಷಕ ಡಾ.ಮನೋಹರ ಕಲ್ಲಕಟ್ಟ, ಮಾನ್ಯ ಶ್ರೀಅಯ್ಯಪ್ಪ ಭಜನಾ ಮಂದಿರದ ಕಾರ್ಯದರ್ಶಿ ಸಂತೋಷ್ ಕುಮಾರ್ ಮಾನ್ಯ, ದಿವ್ಯನಾಥ ರೈ ಕಾವು, ಮಂಜುನಾಥ ಡಿ.ಮಾನ್ಯ, ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದು ಶುಭಹಾರೈಸಿದರು.
ದೀಕ್ಷಾ ಕೊಲ್ಲಂಗಾನ ಸ್ವಾಗತಿಸಿ, ಶರಣ್ಯ ಶ್ರೀನಿವಾಸ್ ಪುತ್ತೂರು ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೊಲ್ಲಂಗಾನ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.