ಪಣಜಿ: ಎರಡು ಮೂಳೆ ಚಿಕಿತ್ಸೆಗಳ ನಂತರ ಕೇಂದ್ರ ಆಯುಷ್ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ.
ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಚಿವ ನಾಯಕ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಸಾವಂತ್, ವೈಯಕ್ತಿಕವಾಗಿ ಸಚಿವರನ್ನು ಭೇಟಿ ಮಾಡಿ ಮಾಡಿ ಆರೋಗ್ಯ ವಿಚಾರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ನಡೆಸಲಾದ ಎರಡು ಮೂಳೆ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ ಎಂದು ಹೇಳಿದ್ದಾರೆ.
ನಾಯಕ್ ಅವರ ಆರೋಗ್ಯ ವಿಚಾರಿಸಲು ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಸೋಮವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಸಚಿವ ನಾಯಕ್ ಗಾಯಗೊಂಡಿದ್ದಾರೆ. ಅವರ ಪತ್ನಿ ವಿಜಯಾ ಮತ್ತು ಆಪ್ತ ಕಾರ್ಯದರ್ಶಿ ದೀಪಕ್ ದುಬೆ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಮತ್ತು ವೈಯಕ್ತಿಕ ಭದ್ರತಾ ಅಧಿಕಾರಿ ನಗರದ ಸಮೀಪದಲ್ಲಿರುವ ಜಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ನಡೆದ ಯಲ್ಲಾಪುರದಿಂದ ನಾಯಕ್ ಅವರನ್ನು ಜಿಎಂಸಿಗೆ ದಾಖಲಿಸಿ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಸಾವಂತ್ ಹೇಳಿದ್ದಾರೆ.
ನಾಯಕ್ ಅವರು ಉತ್ತರ ಗೋವಾ ಲೋಕಸಭಾ ಕ್ಷೇತ್ರದಿಂದ ಐದನೇ ಅವಧಿಗೆ ಪ್ರತಿನಿಧಿಸುತ್ತಿದ್ದಾರೆ. ಅವರು ಭಾರತೀಯ ಜನತಾ ಪಕ್ಷದ ಗೋವಾ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.