ಅಹ್ಮದಾಬಾದ್ : ನವೆಂಬರ್ ತಿಂಗಳಿನಿಂದ ಜಗತ್ತಿನ ವಿವಿಧೆಡೆ ಕಾಣಿಸಿಕೊಂಡು ಅಷ್ಟೇ ವೇಗವಾಗಿ ನಾಪತ್ತೆಯಾದ ನಿಗೂಢ ಲೋಹದ ಸ್ಥಂಭ ಈ ಬಾರಿ ಗುಜರಾತ್‍ನ ಅಹ್ಮದಾಬಾದ್ ನಗರದ ಉದ್ಯಾನವನವೊಂದರಲ್ಲಿ ಪತ್ತೆಯಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಲೋಹದ ಸ್ಥಂಭ ಪತ್ತೆಯಾಗಿದೆ. ಆದರೆ ಜಗತ್ತಿನ ಇತರೆಡೆಯಂತೆ ಈ ಸ್ಥಂಭ ಬಹಳ ಹೊತ್ತು ನಿಗೂಢವಾಗಿ ಉಳಿದಿಲ್ಲ. ಖಾಸಗಿ ಸಂಸ್ಥೆಯೊಂದು ಇದನ್ನು ಅಳವಡಿಸಿದೆ ಎಂದು ತಿಳಿದು ಬಂದಿದೆ.
ತ್ರಿಭುಜಾಕೃತಿಯ ಸ್ಥಂಭ ಸುಮಾರು ಏಳು ಅಡಿ ಎತ್ತರವಿದ್ದು ಗುರುವಾರ ಬೆಳಿಗ್ಗೆ ಎಸ್ ಜಿ ಹೈವೇ ಸಮೀಪದ ಉದ್ಯಾನವನವೊಂದರಲ್ಲಿ ಕಾಣಿಸಿಕೊಂಡಿದೆ. ಈ ಉದ್ಯಾನವನವನ್ನು ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಹಾಗೂ ಸಿಂಫೊನಿ ಲಿಮಿಟೆಡ್ ಎಂಬ ಸಂಸ್ಥೆ ಜಂಟಿಯಾಗಿ ನೋಡಿಕೊಳ್ಳುತ್ತಿವೆ. ಥಲ್ತೇಜ್ ಪ್ರದೇಶದ ಗುರುದ್ವಾರದ ಸಮೀಪವಿರುವ ಈ ಸ್ಥಂಭವನ್ನು ಇತ್ತೀಚೆಗೆ ಮುಖ್ಯಮಂತ್ರಿ ವಿಜಯ್ ರುಪಾನಿ ಉದ್ಘಾಟಿಸಿದ್ದರು.
ಈ ಸ್ಥಂಭಧ ಮಿರುಗುವ ಭಾಗಗಳಲ್ಲಿ ತಮ್ಮ ಪ್ರತಿರೂಪವನ್ನು ಜನರು ಕಾಣಬಹುದು ಹಾಗೂ ಸೆಲ್ಫೀಗಳನ್ನೂ ಕ್ಲಿಕ್ಕಿಸಬಹುದು ಎಂದು ಎಎಂಸಿ ಗಾರ್ಡನ್ ಇಲಾಖೆಯ ನಿರ್ದೇಶಕ ಜಿಗ್ನೇಶ್ ಪಟೇಲ್ ಹೇಳಿದ್ದಾರೆ. ಈ ಲೋಹದ ಸ್ಥಂಭವನ್ನು ಸಿಂಫೊನಿ ಫಾರೆಸ್ಟ್ ಪಾರ್ಕ್ ನಲ್ಲಿ ಡಿಸೆಂಬರ್ 29ರಂದು ಅಳವಡಿಸಲಾಗಿತ್ತಾದರೂ ಸಂಸ್ಥೆ ಅದಕ್ಕೆ ಹೆಚ್ಚು ಪ್ರಚಾರ ನೀಡಿರಲಿಲ್ಲ. ಇಂತಹುದೇ ನಿಗೂಢ ಸ್ಥಂಭ ಮೊದಲು ಅಮೆರಿಕಾದ ಉಟಾಹ್ ಎಂಬಲ್ಲಿ ಮೊದಲು ಕಾಣಿಸಿಕೊಂಡು ನಂತರ ಜಗತ್ತಿನ 30 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತ್ತು.