ಕಾಸರಗೋಡು: ಕರಾವಳಿ ಭಾಗದ ದಶಕಗಳ ಕನಸು ನಿನ್ನೆ ಕೊನೆಗೂ ಸಾಕಾರಗೊಂಡಿದೆ. ಕೊಚ್ಚಿ-ಮಂಗಳೂರು ಅನಿಲ ಸರಬರಾಜು ಗೈಲ್ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡು ನಿನ್ನೆ ಲೋಕಾರ್ಪಣೆಗೊಂಡಿತು.
ಆದರೆ ಅದಕ್ಕಿಂತಲೂ ವಿಚಿತ್ರ ಸಂಗತಿಯೆಂದರೆ ಈ ಯೋಜನೆ ಆರಂಭಗೊಂಡ ವೇಳೆ ಯೋಜನೆ ಕೆಲವು ವರ್ಷಗಳ ಕಾಲ ಹಳ್ಳ ಹಿಡಿಯುವಂತೆ ಮಾಡಿದ್ದ ಸಿಪಿಎಂ ಪಕ್ಷದ ಮುಖ್ಯಮಂತ್ರಿ ನಿನ್ನೆಯ ಉದ್ಘಾಟನಾ ಸಮಾರಂಭದಲ್ಲಿ ಗೈಲ್ ನಮ್ಮ ಸರ್ಕಾರದ ಹೆಮ್ಮೆ ಎಂದು ಬೀಗಿದ್ದು ಯಾವ ಅರ್ಥದಲ್ಲಿ ಎನ್ನುವುದು ಕುತೂಹಲ ಮತ್ತು ರಾಜಕೀಯ ಸ್ವಾರ್ಥದ ಬೇರು ಎಷ್ಟು ಆಳಕ್ಕಿಳಿದಿದೆ ಎಂಬುದರ ನಗ್ನ ಸಾಕ್ಷಿಯಾಗಿ ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವಂತೆ ಮಾಡಿರುವುದಂತೂ ನಿಜ.
ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪತ್ರಿಕಾ ಕಾರ್ಯದರ್ಶಿ ಪಿ.ಟಿ. ಥಾಮಸ್ ಈ ಬಗ್ಗೆ ನಿನ್ನೆಯೇ ಪೇಸ್ ಬುಕ್ ಪೋಸ್ಟ್ ನಲ್ಲಿ ಈ ಬಗ್ಗೆ ಲೇವಡಿಗೈದಿದ್ದು ಗೈಲ್ ಪೈಪ್ ಲೈನ್ ಮಾಡುವುದಾದರೆ ಸ್ಪೋಟಿಸುವುದಾಗಿ ಗಲಭೆ ಸೃಷ್ಟಿಸಿದವರು ಇಂದು ಪ್ರಚಾರದ ಸ್ಪೋಟ ನಡೆಸಿರುವುದನ್ನು ರಾಜ್ಯದ ಜನರು ಗಮನಿಸುತ್ತಿರುವುದನ್ನು ಗ್ರಹಿಸಬೇಕಿತ್ತೆಂದು ಅಪಹಾಸ್ಯ ಮಾಡಿದ್ದಾರೆ. ಈಗ ಗೇಲ್ ಯೋಜನೆಯನ್ನು ತಮ್ಮ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿರುವ ಎಡಪಕ್ಷಕ್ಕೆ ಪರರ ಸಾಧನೆಯ ಮೂಲಕ ಮುಖ ಉಳಿಸುವ ಗತಿಗೇಡುತನ ಬಂದಿರುವುದಾದರೂ ಯಾರ ಶಾಪವೆಂಬುದು ಅರ್ಥವಾಗದ ಪ್ರಶ್ನೆಯಾಗುತ್ತದೆ.
ಗೇಲ್ ಗೇಲ್ ಗೋ ಅವೇ?-ನಿಜವಾಗಿಯೂ ಗೋ ಎವೇ ಯೊಂದೇ ದಾರಿ!!:
ಗೇಲ್ ಯೋಜನೆಯ ಉದ್ಘಾಟನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ಅರ್ಧ ಪುಟದ ಜಾಹೀರಾತು ಮತ್ತು ಪಿಣರಾಯಿ ಸರ್ಕಾರದ ಅರ್ಧ ಪುಟದ ಜಾಹೀರಾತು ನಿನ್ನೆ ಮಲೆಯಾಳ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದರಿಂದ ಯೋಜನೆಯೊಂದು ಇಷ್ಟೊಂದು ಪ್ರತಿಭಟನೆಯ ಮಧ್ಯೆಯೂ ಪೂರ್ಣಗೊಂಡಿರುವುದು ಆಶ್ವರ್ಯ ತರಿಸಿದ್ದೂ ನಿಜ! ಇದು ಬಹಳ ಹಿಂದೆಯೇ ಕಾರ್ಯಗತಗೊಳಿಸಬೇಕಾದ ಯೋಜನೆಯಾಗಿತ್ತು. ಗ್ಯಾಸ್ ಪೈಪ್ಲೈನ್ ಸ್ಫೋಟಗೊಳಿಸುತ್ತೇವೆ ಎಂಬ ಫುಕಾರು ಹರಡುವ ಮೂಲಕ ದೇಶವನ್ನು ಭಯಭೀತಗೊಳಿಸಲು ಆಂದೋಲನ ಮಾಡಿದವರ ಹೆಮ್ಮೆಯ ಸಾಧನೆಗಳಲ್ಲಿ ಗೇಲ್ ಯೋಜನೆಯನ್ನು ಈಗ ಆಚರಿಸಲಾಗುತ್ತಿದೆ.
ಯುಡಿಎಫ್ ಆಳ್ವಿಕೆಯಲ್ಲಿಗೇಲ್ ಯೋಜನೆ ಸಾಕಾರಗೊಳ್ಳದಂತೆ ಅಂದು ಸಿಪಿಎಂ ವ್ಯಾಪಕ ಪ್ರಚಾರ ಮತ್ತು ಆಂದೋಲನವನ್ನು ಮಾಡಿದ್ದನ್ನು ಇಂದು ಪೂರ್ಣವಾಗಿ ಮರೆತಿದೆ. 'ಗೇಲ್ ಗ್ಯಾಸ್ ಪೈಪ್‍ಲೈನ್ ವಿರುದ್ಧ ಸಿಪಿಎಂ ಆಂದೋಲನ' ಎಂಬ ಶೀರ್ಷಿಕೆಯ ನೋಟಿಸ್‍ನಲ್ಲಿ ಸಿಪಿಎಂ ದೇಶದ ಸಂಪೂರ್ಣ ಉದ್ಧಾರಕ್ಕಾಗಿ ರಕ್ಷಣಾತ್ಮಕ ಹೋರಾಟವನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದೆ. ಗೇಲ್ ಗೇಲ್ ಗೋ ಅವೇ ಎಂಬ ಘೋಷಣೆ ಇತ್ತು ಆ ಕರಪತ್ರದಲ್ಲಿತ್ತು. ಪಾಪ......ಕರಪತ್ರ ಅಳುತ್ತಿರಬೇಕು. ತಾನು ಸುಳ್ಳಾದುದಕೆ!!
ಸಿಪಿಎಂ ಮತ್ತು ಅದರ ಕೆಲವು ಅಂಗಸಂಸ್ಥೆಗಳ ತೀವ್ರ ವಿರೋಧದ ಹೊರತಾಗಿಯೂ, ಯುಡಿಎಫ್ 90 ಪ್ರತಿಶತ ಜನರಿಂದ ಗೇಲ್ ಅನಿಲ ಕೊಳವೆ ಮಾರ್ಗಕ್ಕೆ ಅಗತ್ಯವಾದ ಭೂಮಿಯನ್ನು ಬಳಸಲು ಅನುಮತಿ ಪಡೆದಿತ್ತು.
ಭೂಸ್ವಾಧೀನಕ್ಕೆ ಅಗತ್ಯವಾದ 28 ನಿಲ್ದಾಣಗಳಲ್ಲಿ 15 ನಿಲ್ದಾಣಗಳನ್ನು ಯುಡಿಎಫ್ ಪೂರ್ಣಗೊಳಿಸಿತ್ತು. ಯುಡಿಎಫ್ ಯೋಜನೆ ತನ್ನ ಗುರಿಯನ್ನು ಸಾಧಿಸುತ್ತದೆ ಎಂದು ಸ್ಪಷ್ಟವಾದಾಗ ಸಿಪಿಎಂ ಸುಳ್ಳು ಪ್ರಚಾರ ಮತ್ತು ಆಂದೋಲನವನ್ನು ಪ್ರಾರಂಭಿಸಿತು. ಗೇಲ್ ಯೋಜನೆಯನ್ನು ವಿಳಂಬ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿ ಎಡಪಂಥೀಯರು ನಿಜವಾಗಿಯೂ ಹೆಮ್ಮೆಪಡಬೇಕಿತ್ತು.