ತಿರುವನಂತಪುರ: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನೇಮಂ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಸ್ಪರ್ಧಿಸುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ. ರಾಜ್ಯದಲ್ಲಿ ಬಿಜೆಪಿಯ ಏಕೈಕ ಸಿಟ್ಟಿಂಗ್ ಸ್ಥಾನವಾದ ನೇಮಂನ ಪ್ರಸ್ತುತ ಶಾಸಕ ಓ. ರಾಜಗೋಪಾಲ್ ಅವರ ಬದಲಿಯಾಗಿ ಕುಮ್ಮನಂ ರಾಜಶೇಖರನ್ ಅವರನ್ನು ಪರಿಗಣಿಸಲಾಗುತ್ತಿದೆ. ಕುಮ್ಮನಂಗೆ ಕ್ಷೇತ್ರದತ್ತ ಗಮನ ಹರಿಸಲು ನಿರ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಕೂಡ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು ಸ್ಪಷ್ಟಚಿತ್ರಣ ಇನ್ನಷ್ಟೇ ಹೊರಬರಬೇಕಿದೆ.
ನೇಮಂ ಉಳಿಸಿಕೊಳ್ಳಲು ಕುಮ್ಮನಂ ರಾಜಶೇಖರನ್:
ನೇಮಂ ಕ್ಷೇತ್ರದ ಪ್ರಸ್ತುತ ಶಾಸಕ ಓ.ರಾಜ ಗೋಪಾಲ್ ಅವರಿಗೆ 91 ವರ್ಷ ವಯಸ್ಸಾಗಿದೆ ಮತ್ತು ಅವರ ವಯಸ್ಸನ್ನು ಪರಿಗಣಿಸಿ ಪಕ್ಷವು ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಬಿಜೆಪಿಯ ಏಕೈಕ ಸಿಟ್ಟಿಂಗ್ ಸ್ಥಾನದಲ್ಲಿ ಓ. ರಾಜಗೋಪಾಲ್ ಅವರು ಕಳೆದ ಚುನಾವಣೆಯಲ್ಲಿ ಪಕ್ಷೇತರವಾಗಿ ಮತಗಳನ್ನು ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಕುಮ್ಮನಂ ರಾಜಶೇಖರನ್ ಅವರೂ ಜನರ ಬೆಂಬಲವನ್ನು ಹೊಂದಿರುವುದರಿಂದ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು ಎಂದು ಪಕ್ಷ ನಂಬಿದೆ. ಕುಮ್ಮನಂ ಅವರನ್ನು ವಿಧಾನಸಭೆಗೆ ಕರೆತರುವ ಕ್ರಮದ ಹಿಂದೆ ಆರ್.ಎಸ್.ಎಸ್ ಕೈವಾಡವಿದೆ ಎಂದು ವರದಿಯಾಗಿದೆ.
ರಾಜಗೋಪಾಲ್ ಪಡೆದದ್ದು 8671 ಮತಗಳ ಮುನ್ನಡೆ:
2016 ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ ವಿ ಶಿವನ್ ಕುಟ್ಟಿ 59,142 ಮತಗಳನ್ನು ಪಡೆದರೆ, ರಾಜಗೋಪಾಲ್ 67,813 ಮತಗಳನ್ನು ಪಡೆದು ವಿಜೇತರಾದರು. ರಾಜಗೋಪಾಲ್ 8671 ಮತಗಳನ್ನು ಪಡೆದು ರಾಜ್ಯದ ಮೊದಲ ಏಕೈಕ ಬಿಜೆಪಿ ಶಾಸಕರಾದರು. ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ವಿ ಸುರೇಂದ್ರನ್ ಪಿಳ್ಳೈ ಅವರು 13,860 ಮತಗಳನ್ನು ಪಡೆದಿದ್ದರು. 2011 ರ ಚುನಾವಣೆಯಲ್ಲಿ ವಿ ಶಿವನ್‍ಕುಟ್ಟಿ 6415 ಮತಗಳಿಂದ ರಾಜಗೋಪಾಲ್ ಅವರನ್ನು ಪರಾಭವಗೊಳಿಸಿದ್ದರು. ಆದ್ದರಿಂದ ಈ ಬಾರಿಯೂ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ವಟ್ಟಿಯೂರ್ಕಾವಲ್ಲಿ ರಂಗಕ್ಕೆ ಯಾರು?:
ಕುಮ್ಮನಂ ರಾಜಶೇಖರನ್ ನೇಮಂ ನಲ್ಲಿ ಸ್ಪರ್ಧಿಸಿದರೆ, 2016 ರಲ್ಲಿ ಕುಮ್ಮನಂ ಸ್ಪರ್ಧಿಸಿದ್ದ ವಟ್ಟಿಯೂರ್ಕಾವ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. 2016 ರ ಚುನಾವಣೆಯಲ್ಲಿ ಕುಮ್ಮನಂ ಅವರಿಗೆ ಕೆ ಮುರಲೀಧರನ್ ಎದುರು ಎರಡನೇ ಸ್ಥಾನಕ್ಕೆ ತೃಪ್ತರಾಗಲು ಸಾಧ್ಯವಾಯಿತು. ಆದರೆ, 2019 ರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್ ಸುರೇಶ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಮಾತ್ರವಲ್ಲದೆ, ಮತ ಚಲಾಯಿಸಿದವರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿತ್ತು. ಆದ್ದರಿಂದ ವಟ್ಟಿಯೂರ್ಕಾವಲ್ಲಿನ ಬಿಜೆಪಿ ನಾಯಕತ್ವವು ಈ ಚುನಾವಣೆಯಲ್ಲಿ ಪ್ರಬಲ ನಾಯಕನನ್ನು ಪರಿಗಣಿಸಲಿದೆ ಎನ್ನಲಾಗಿದೆ. ಮಾಜಿ ರಾಜ್ಯ ಅಧ್ಯಕ್ಷ ಪಿ.ಕೆ.ಕೃಷ್ಣದಾಸ್ ಈ ಬಾರಿ ವತ್ತಿಯೂರ್ಕಾವ್ ಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುಳಿವು ಲಭ್ಯವಾಗಿದೆ.
ಸುರೇಂದ್ರನ್ ಸ್ಪರ್ಧಿಸುವ ಸಾಧ್ಯತೆ:
ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಸಾಧ್ಯತೆ ಇದೆ. ಸುರೇಂದ್ರನ್ ಕಣದಲ್ಲಿರಬೇಕು ಎಂದು ಆರೆಸ್ಸೆಸ್ ನಾಯಕತ್ವ ಸೂಚಿಸಿದೆ. ಸುರೇಂದ್ರನ್ ಅವರು ತಿರುವನಂತಪುರ ಅಥವಾ ಪತ್ತನಂತಿಟ್ಟದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಮಂಜೇಶ್ವರದತ್ತ??
ಈ ಮಧ್ಯೆ ಸತತ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಸ್ಪರ್ಧಿಸಿದ್ದ ಮಹತ್ವಪೂರ್ಣ ಕ್ಷೇತ್ರವಾದ ಗಡಿ ಕ್ಷೇತ್ರ ಮಂಜೇಶ್ವರದಲ್ಲಿ ಈ ಬಾರಿ ಯಾರು ಸ್ಪರ್ಧಿಸುವರೆಂಬುದು ಕುತೂಹಲಕ್ಕೆ ಕಾರಣವಾಗಿದೆ. ಮಂಜೇಶ್ವರದಲ್ಲಿ ಬಿಜೆಪಿಗಿರುವ ದೊಡ್ಡ ಸವಾಲೆಂದರೆ ಸಾಮೂಹಿಕ ನಾಯಕತ್ವದ ಕೊರತೆಯಾಗಿದ್ದು ಜೊತೆಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ದಶಕಗಳಿಂದಲೂ ಕೇಳಿಬರುತ್ತಿರುವ ಸಮಸ್ಯೆಯಾಗಿದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸ್ಪರ್ಧಿಸುವ ಸಾಧ್ಯತೆ ಇದೆಯೆಂದು ಸಂಶಯಿಸಲಾಗಿದೆ. ಈ ಮಧ್ಯೆ ಮಂಜೇಶ್ವರದ ಸ್ಥಳೀಯರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಇದ್ದು ಯುವ ನಾಯಕ ವಿಜಯ ಕುಮಾರ್ ರೈ ಸಹಿತ ಕೆಲವರು ಸ್ಥಾನಾಕಾಂಕ್ಷಿಗಳಾಗಿದ್ದಾರೆಂದು ತಿಳಿದುಬಂದಿದೆ.
ಯಾರು, ಯಾವ ಲೆಕ್ಕಾಚಾರವಿರಿಸಿದ್ದರೂ ಪ್ರಮುಖ ಕ್ಷೇತ್ರಗಳು ಮತ್ತು ಪ್ರಮುಖ ನಾಯಕರ ಬಗ್ಗೆ ಅಂತಿಮ ನಿರ್ಧಾರವು ಕೇಂದ್ರ ನಾಯಕತ್ವದ ನಿರ್ದೇಶಾನುಸಾರ ನಡೆಯಲಿದೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.