ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಭಾರತದಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಲಸಿಕೆ ಕುರಿತು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಲಸಿಕೆ ಪಡೆಯಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, "ಭಾರತದಲ್ಲಿ ನೀಡಲಾಗುತ್ತಿರುವ ಈ ಲಸಿಕೆಗಳು ಕೊರೊನಾ ಸೋಂಕಿನ ಶವಪೆಟ್ಟಿಗೆ ಮೇಲಿನ ಕೊನೇ ಮೊಳೆಯಾಗಲಿದೆ" ಎಂದು ಭರವಸೆ ನೀಡಿದ್ದಾರೆ. ಆದರೆ ಕೆಲವು ರಾಜಕೀಯ ಕಾರಣಗಳಿಗಾಗಿ ಕೆಲವರು ಲಸಿಕೆ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ. ಇದರಿಂದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
"ಲಸಿಕೆ ಪಡೆದ ಯಾರಿಗೂ ಏನೂ ಸಮಸ್ಯೆಯಾಗುವುದಿಲ್ಲ. ಲಸಿಕೆ ವಿಷಯದಲ್ಲಿ ನಮ್ಮ ವೈದ್ಯರಂತೆಯೇ ಎಲ್ಲರಿಗೂ ಸುರಕ್ಷತೆ ನೀಡಲಾಗುತ್ತದೆ. ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಸಂಪೂರ್ಣ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ" ಎಂದರು.
ಕೊರೊನಾ ಲಸಿಕೆ ಅಭಿಯಾನದ ಎರಡನೇ ಹಂತ ಕಠಿಣವಾಗಿರುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿನೋದ್ ಪೌಲ್ ತಿಳಿಸಿದ್ದು, ಆರೋಗ್ಯ ಕಾರ್ಯಕರ್ತರ ನಂತರ ಎರಡನೇ ಹಂತದ ಲಸಿಕಾ ಅಭಿಯಾನವು ಆರಂಭಗೊಳ್ಳಲಿದೆ. ಭಾರತದಲ್ಲಿ ಸದ್ಯಕ್ಕೆ 30 ಮಿಲಿಯನ್ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಐವತ್ತು ವರ್ಷ ಮೇಲ್ಪಟ್ಟ ಸುಮಾರು 270 ಮಿಲಿಯನ್ ಮಂದಿಗೆ ಲಸಿಕೆ ನೀಡುವ ಕಾರ್ಯಕ್ರಮವಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಈ ಸಾಲಿನಲ್ಲಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದುವರೆಗೂ ಭಾರತದಲ್ಲಿ ಹತ್ತು ಮಿಲಿಯನ್ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಗಳನ್ನು ನೀಡಿರುವುದಾಗಿ ತಿಳಿಸಿದರು.