ಕಾಸರಗೋಡು: ಮೋಟಾರು ವಾಹನ ಇಲಾಖೆ ಎಂದರೆ ದಂಡ ವಸೂಲು ಮಾಡುವ ವ್ಯವಸ್ಥೆ ಎಂಬ ಸಾರ್ವಜನಿಕರ ಅಳಲಿನ ಮಧ್ಯೆ ಮಾದರಿ ಚಟುವಟಿಕೆಗಳ ಮೂಲಕ ಇಲಾಖೆಯ ಬಗೆಗಿರುವ ತಪ್ಪು ಕಲ್ಪನೆಯನ್ನು ತೊಡೆದು ಹಾಕುವ ಯತ್ನಕ್ಕೆ ಅಧಿಕೃತರು ಮುಂದಾಗಿ ಸ್ಲಾಘನೆಗೊಳಗಾಗಿದ್ದಾರೆ.
ನಗರದ ಚಂದ್ರಗಿರಿ ರಸ್ತೆಯಲ್ಲಿ ಕಂಡುಬರುತ್ತಿರುವ ಬೃಹತ್ ಹೊಂಡಗಳನ್ನು ಸ್ವತಃ ಇಲಾಖೆಯ ಅಧಿಕೃತರೇ ಮುಂದೆ ನಿಂತು ದುರಸ್ಥಿಗೊಳಿಸಿ ಸುಗಮ ಸಂಚಾರಕ್ಕೆ ಕ್ರಮಕೈಗೊಂಡಿರುವರು. ಪ್ರೆಸ್ ಕ್ಲಬ್ ಜಂಕ್ಷನ್ ನಿಂದ ಕಾಞಂಗಾಡಿನ ವರೆಗೆ ಅಲ್ಲಲ್ಲಿ ರೂಪುಗೊಂಡ ಹೊಂಡಗಳನ್ನು ದುರಸ್ಥಿಗೊಳಿಸಲಾಗಿದೆ. ಗುಂಡಿಗಳನ್ನು ಮುಚ್ಚಲು ಮೋಟಾರು ವಾಹನ ಇಲಾಖೆಯ ಜಾರಿ ವಿಭಾಗ ಈ ಪ್ರಯತ್ನ ಕೈಗೊಂಡಿತು. ಚಂದ್ರಗಿರಿ ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ಮತ್ತು ಉದುಮಾ ಆಟೋ ರಿಕ್ಷಾ ಸ್ಟ್ಯಾಂಡ್ ಬಳಿ ಹೊಂಡಗಳನ್ನು ದುರಸ್ಥಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಂಡಗಳಿಂದ ಅಪಘಾತಗಳು:
ದೊಡ್ಡ ಗುಂಡಿಗಳ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಕರಾವಳಿ ಹೆದ್ದಾರಿಯಲ್ಲಿ ವಾಹನಗಳು ಅಪಘಾತದಲ್ಲಿ ಸಿಲುಕಿಕೊಂಡು ಸಾಕಷ್ಟು ಹಾನಿಗಳುಂಟಾಗಿವೆ. ದ್ವಿಚಕ್ರ ವಾಹನಗಳು ಅತೀ ಹೆಚ್ಚು ಅಪಘಾತಕ್ಕೊಳಗಾಗುತ್ತಿದ್ದವು. ಭಾರಿ ಮಳೆಯ ಸಂದರ್ಭ ದೊಡ್ಡ ಹೊಂಡಗಳು ರೂಪುಗೊಂಡಿದ್ದವು. ಕಳೆದ ವರ್ಷ ದುರಸ್ಥಿಗೊಳಿಸಿರುವಲ್ಲೇ ಈ ವರ್ಷವೂ ಹೊಂಡಗಳು ಸೃಷ್ಟಿಯಾಗಿದ್ದವು. ರಾತ್ರಿ ವೇಳೆ ಹೊಂಡಗಳಿರುವುದು ಗಮನಕ್ಕೆ ಬಾರದೆ ವಾಹನಗಳು ಅಪಘಾತಗಳಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯವಾಗಿತ್ತು. ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿ ತಿಂಗಳುಗಳೇ ಕಳೆದಿವೆ.
ಕೆಎಸ್‍ಟಿಪಿ ಅಧಿಕಾರಿಗಳಿಂದ ದುರಸ್ಥಿ!:
ಕಾಸರಗೋಡು ಆರ್ ಟಿ ಒ ಜಾರಿ ಅಧಿಕಾರಿ ಟಿ.ಎಂ ಜೆರ್ಸನ್ ಅವರ ಸೂಚನೆಯಂತೆ ಹೊಂಡಗಳನ್ನು ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳಲು ಕೆಎಸ್‍ಟಿಪಿ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಶನಿವಾರ ಸಂಜೆ ಪ್ರಾರಂಭವಾದ ದುರಸ್ಥಿ ಸೋಮವಾರದೊಳಗೆ ಪೂರ್ಣಗೊಂಡಿದೆ. ಮೋಟಾರು ವಾಹನ ನಿರೀಕ್ಷಕ ಬಿನೀಶ್ ಕುಮಾರ್, ಸಹಾಯಕ ಮೋಟಾರು ವಾಹನ ನಿರೀಕ್ಷಕರಾದ ಜಯರಾಜ್ ತಿಲಕ್ ಮತ್ತು ಸುಧೀಶ್ ಅವರ ಸಹಾಯದಿಂದ ಕಾಸರಗೋಡು ನಗರ ಸಂಚಾರ ಪೋಲೀಸರು ಸಂಚಾರವನ್ನು ನಿಯಂತ್ರಿಸಿದರು.