ಕಾಸರಗೋಡು: ವೆಳ್ಳೆರಿಕುಂಡು ಸಮೀಪದ ವೆಸ್ಟ್ ಎಳೇರಿ ಗ್ರಾ.ಪಂ. ವ್ಯಾಪ್ತಿಯ ಭೀಮನಡಿ ಎಂಬಲ್ಲಿ ಕೆಂಬಣ್ಣದ ಗೋರಿಗಳು ಮತ್ತು ವಿವಿಧ ಗಾತ್ರ, ಆಕಾರಗಳ ಮಣ್ಣಿನ ಪಾತ್ರೆಗಳನ್ನು ಪತ್ತೆಹಚ್ಚಲಾಗಿದೆ.
ವಿಶೇಷ ವಸ್ತುಗಳ ಬಗ್ಗೆ ಸ್ಥಳೀಯರಾದ ಕೆ.ಕೆ.ಮಧು, ರಾಘವನ್ ಅಡ್ಕ, ಶ್ರೀಧರನ್ ತೆಕ್ಕುಂಬಡನ್ ಅವರು ನೀಡಿದ ಮಾಹಿತಿಯ ಮೇರೆಗೆ ಇತಿಹಾಸ ಸಂಶೋಧಕ ಮತ್ತು ಕಾಞಂಗಾಡ್ ನೆಹರು ಕಲಾ-ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ನಂದಕುಮಾರ್ ಕೋರೋತ್, ಸಿ.ಪಿ. ರಾಜೀವನ್ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅವುಗಳು ಶಿಲಾ ಯುಗದ ಕಾಲದ ವಸ್ತುಗಳೆಂಬುದನ್ನು ದೃಢಪಡಿಸಲಾಗಿದೆ. ಸ್ಥಳೀಯವಾಗಿ ಮಿನಿಯರ ಅಥವಾ ನಿಧಿಕುಳಿ ಎಂದು ಕರೆಯಲಾಗುವ ಏಳು ಕೆಂಪು ಗೋರಿಗಳು ಇಲ್ಲಿ ನಿಧಿ ಹುಡುಕಾಟದ ದುಷ್ಕರ್ಮಿಗಳಿಂದ ನಾಶವಾಗಿರುವುದು ಗಮನಕ್ಕೆ ಬಂದಿದೆ.
ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ದೊರೆತ ಪುರಾತನ ಸ್ಮಾರಕಗಳ ಸಂಖ್ಯೆ 100 ದಾಟಿದೆ. ಚೀಮೇನಿ, ಪಳ್ಳಿಪ್ಪಾರ, ಪೋತಕಂಡಂ, ಮಾವುಳ್ಳಚ್ಚಾಲ್, ತಿಮಿರಿ ನಾಲಿಲಕಂಡಂ, ಪನಂಗಾಡ್, ಪೈವಳಿಕೆ, ಕಾರ್ಯಾಡು, ತಲೆಯಡ್ಕ, ಉಮ್ಮಿಚ್ಚಿಪ್ಪಾಯಿಲ್, ಬಂಗಳಂ, ಪರಪ್ಪ ಮೊದಲಾದೆಡೆ ಗೋರಿಗಳು ಈ ಹಿಂದೆ ಕಂಡುಬಂದಿದ್ದವು. ಶಿಲಾಯುಗದ ಜನರು ಈ ಗೋರಿಗಳನ್ನು ನಿರ್ಮಿಸಿರುವರೆಂದು ಸಂಶೋಧಕರು ತಿಳಿಸಿದ್ದಾರೆ.
ಅಭಿಮತ:
ನೆಗಾಳ್ತಿಕ್ ಅಥವಾ ಮಹಾ ಶಿಲಾಯುಗ ಕಾಲದ ಇಂತಹ ರಚನೆಗಳು ಕಾಸರಗೋಡು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಲಭ್ಯವಾಗಿದೆ. ಪ್ರಾದೇಶಿಕವಾಗಿ ಹಲವಾರು ಹೆಸರುಗಳಿಂದ ಇವುಗಳನ್ನು ಕರೆಯುತ್ತಿದ್ದರೂ ಮಹಾ ಶಿಲಾಯುಗ ಕಾಲದ ಗೋರಿಗಳಾಗಿವೆ. ಇವುಗಳನ್ನು ಸಂರಕ್ಷಿಸುವ ಅಗತ್ಯವಿದ್ದು, ಆಧುನಿಕತೆಯ ಭರಾಟೆಯಲ್ಲಿ ನಾಶಗೊಳಿಸುವ, ನಿಧಿಯ ಆಸೆಗೆ ಅಗೆದು ಹಾಳು ಮಾಡುವ ಮನೋಭಾವದಿಂದ ಹಿಂದೆ ಸರಿದು ನಮ್ಮ ಇತಿಹಾಸದ ಬಗ್ಗೆ ಅಭಿಮಾನದಿಂದ ಕಾಯ್ದಿರಿಸುವ ಪ್ರಯತ್ನಗಳನ್ನು ಮಾಡಬೇಕು.
ಡಾ.ನಂದಕುಮಾರ್ ಕೋರೋತ್.
ಇತಿಹಾಸ ಸಂಶೋಧಕ, ಪ್ರಾಧ್ಯಾಪಕ ನೆಹರೂ ಕಲಾ-ವಿಜ್ಞಾನ ಕಾಲೇಜು ಕಾಞಂಗಾಡ್.