ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯು ಕೋವಿಡ್ ಚಿಕಿತ್ಸೆಗೆ ಅಭಿವೃದ್ಧಿಪಡಿಸಲಿರುವ ಇನ್ ಸ್ಟ್ರಾನಾಸಲ್ ಲಸಿಕೆ (ಮೂಗಿನ ಮೂಲಕ ನೀಡುವ) ಮೊದಲ ಹಂತದ ಪ್ರಯೋಗ ನಡೆಸಲು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ -ಸಿಡಿಎಸ್ಕೊ ತಜ್ಞರ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಲಸಿಕೆ ಕೆಲಸ ಮಾಡಿದರೆ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೇಮ್- ಚೇಂಜರ್ ಆಗಲಿದೆ ಎಂದು ಸರ್ಕಾರದ ಉನ್ನತ ಮಟ್ಟದ ಅಧಿಕಾರಿ ಹೇಳಿದ್ದಾರೆ.
ಇನ್ ಸ್ಟ್ರಾನಾಸಲ್ ಲಸಿಕೆಯ ಮೊದಲನೇ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ಕೋರಿ ಭಾರತೀಯ ಔಷಧೀಯ ಮಹಾನಿಯಂತ್ರಕರು (ಡಿಸಿಜಿಐ)ಗೆ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಹಂತದ ಪ್ರಯೋಗ ನಡೆಸಲು ಸಿಡಿಎಸ್ಕೊ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಮೊದಲನೇ ಹಂತದ ಮಾನವ ಪ್ರಯೋಗದ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿ ಮಾಹಿತಿ ಆಧಾರದ ಮೇಲೆ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಕಂಪನಿಗೆ ಅನುಮತಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಮೂಗಿನ ಮೂಲಕ ಲಸಿಕೆ ನೀಡುವುದನ್ನು ಕಂಡುಹಿಡಿಯಲಾಗುತ್ತಿದೆ. ಇದರ ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಬಂದಿರುವುದಾಗಿ ನೀತಿ ಆಯೋಗದ ಸದಸ್ಯ ವಿ. ಕೆ. ಪೌಲ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಲಸಿಕೆ ತಯಾರಿಕೆ ಕಾರ್ಯ ಪೂರ್ಣಗೊಂಡರೆ ಗೇಮ್ ಚೆಂಜರ್ ಆಗಲಿದೆ. ಇದರ ಅಭಿವೃದ್ಧಿಯತ್ತ ಎದುರು ನೋಡುತ್ತಿರುವುದಾಗಿ ಪೌಲ್ ತಿಳಿಸಿದರು.