ಜಮ್ಮು: ಗಣರಾಜ್ಯೋತ್ಸವದ ಅಂಗವಾಗಿ ಜಮ್ಮು ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆಯು(ಬಿಎಸ್‌ಎಫ್) ಮಂಗಳವಾರ 131 ಅಡಿ ಎತ್ತರದ ಕಂಬದಲ್ಲಿ ಬೃಹತ್ ರಾಷ್ಟ್ರಧ್ವಜವನ್ನು ಆರೋಹಣ ಮಾಡಿದೆ.
'ಜಮ್ಮು ಪ್ರದೇಶದಲ್ಲಿ ಇರುವ ಬೃಹತ್ ರಾಷ್ಟ್ರಧ್ವಜ ಇದಾಗಿದ್ದು, 30 ಅಡಿ ಅಗಲ ಹಾಗೂ 20 ಅಡಿ ಉದ್ದವಿದೆ. 131 ಅಡಿ ಎತ್ತರದ ಕಂಬದಲ್ಲಿ ಹಾರಾಡುವ ಈ ಧ್ವಜವು, ಪಾಕಿಸ್ತಾನದೊಳಗೆ ಹಲವು ಕಿ.ಮೀ ದೂರವಿರುವವರಿಗೂ ಕಾಣಿಸಲಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದರು.
ಅಂತರರಾಷ್ಟ್ರೀಯ ಗಡಿಯಲ್ಲಿ(ಐಬಿ) ಜಮ್ಮು ಫ್ರಂಟಿಯರ್‌ನ ಬಿಎಸ್‌ಎಫ್‌ನ ಇನ್‌ಸ್ಪೆಕ್ಟರ್ ಜನರಲ್ ಎನ್.ಎಸ್.ಜಮ್ವಾಲ್ ಧ್ವಜಾರೋಹಣ ಮಾಡಿದರು. ಒಕ್ಟ್ರಾಯ್ ವಲಯದಲ್ಲಿರುವ ಈ ಧ್ವಜವನ್ನು ಲುಪಿನ್ ಫೌಂಡೇಷನ್, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಹಾಗೂ ಆಡಳಿತದ ಸಹಯೋಗದಿಂದ ಅನಾವರಣಗೊಳಿಸಲಾಗಿದೆ.