ಕೋಲ್ಕತ: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ (ಜ.27) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ತಿಂಗಳ ಆರಂಭದಲ್ಲಿ ಲಘು ಹೃದಯಾಘಾತಕ್ಕೊಳಗಾಗಿ ಕೋಲ್ಕತದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗಿನಿಂದ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬ್ಲಾಕ್ ಆಗಿದ್ದ ಮೂರು ಕೊರೋನರಿ ಆರ್ಟರಿ(ಪರಿಧಮನಿಯ ಅಪಧಮನಿಗಳು)ಯನ್ನು ಗುರುತಿಸಿ ಬ್ಲಾಕೇಜ್ ತೆಗೆದುಹಾಕಲು ಸ್ಟೆಂಟ್ ಅಳವಡಿಸಲಾಗಿತ್ತು. ಅಲ್ಲದೆ, ಮನೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಇಂದು ಮತ್ತೆ ಎದೆನೋವು ಕಾಣಿಸಿಕೊಂಡಿದೆ.
ಈ ಹಿಂದೆ 9 ವೈದ್ಯರ ತಂಡ ಗಂಗೂಲಿಗೆ ಚಿಕಿತ್ಸೆ ನೀಡಿದ್ದರು. ಗಂಗೂಲಿಯವರ ಕುರಿತು ಮಾತನಾಡಿದ್ದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯ ಎಂಡಿ ಹಾಗೂ ಸಿಇಓ ಡಾ. ರೂಪಾಲಿ ಬಸು, ಮನೆಯಲ್ಲಿಯೂ ಅವರ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದಿದ್ದರು.
ಜನವರಿ 2 ರಂದು ತಮ್ಮ ಮನೆಯ ಜಿಮ್‌ನ ಟ್ರೆಡ್ ಮಿಲ್‌ನಲ್ಲಿ ಓಡುತ್ತಿದ್ದ ವೇಳೆ ಸೌರವ್ ಗಂಗೂಲಿ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಶನಿವಾರ (ಜ.2) ಒಂದು ಗಂಟೆಗೆ ಆಸ್ಪತ್ರೆಗೆ ದಾಖಲಾದಾಗ ಗಂಗೂಲಿ ಅವರ ಪಲ್ಸ್ 70/ನಿಮಿಷ, ಬಿಪಿ 130/80 ಎಂಎಂ ಇತ್ತು ಹಾಗೂ ಇತರೆ ಕ್ಲಿನಿಕಲ್ ಪ್ಯಾರಾಮೀಟರ್‌ಗಳು ಸಾಮಾನ್ಯ ಸ್ಥಿತಿಯಲ್ಲಿವೆ,' ಎಂದು ವುಡ್‌ಲ್ಯಾಂಡ್ಸ್ ಆಸ್ಪತ್ರೆಯ ಮೆಡಿಕಲ್ ಬುಲೆಟಿನ್‌ನಲ್ಲಿ ತಿಳಿಸಲಾಗಿತ್ತು.
ಜನವರಿ 7ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಕರೊನಾ ವೈರಸ್ ಕೂಡ ನೆಗಿಟಿವ್ ಆಗಿತ್ತು. ಮೂರರಿಂದ ನಾಲ್ಕು ವಾರಗಳ ವಿಶ್ರಾಂತಿ ಪಡೆದರೆ ಗಂಗೂಲಿ ಸಂಪೂರ್ಣ ಗುಣಮುಖರಾಗಲಿದ್ದಾರೆಂದು ವೈದ್ಯರು ತಿಳಿಸಿದ್ದರು.