ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಜ.31ರಂದು ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡುವ ವೇಳೆ ಬೂತ್ ಗಳಲ್ಲಿ ಎರಡು ವಿಚಾರಗಳು ಗಮನಾರ್ಹವಾಗಲಿವೆ. ಒಂದು ರೋಗ ಪ್ರತಿರೋಧ ಇನ್ನೊಂದು ಚೀಟಿ ಎತ್ತುವ ಮೂಲಕ ವಿಜೇತರಾದವರಿಗೆ ಬಂಗಾರದ ನಾಣ್ಯ ಬಹುಮಾನ ರೂಪದಲ್ಲಿ ಲಭಿಸಲಿವೆ.
ಪೋಲಿಯೋ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ ಈ ವಿಭಿನ್ನ ಯೋಜನೆ ಸಿದ್ಧಪಡಿಸಿದೆ. ಕುಂಬಳೆಯ ಅಕ್ಯೂರ್ ಡಯಾಗ್ನಿಸ್ಟಿಕ್ ಲ್ಯಾಬ್ ಬಂಗಾರದ ನಾಣ್ಯದ ಪ್ರಾಯೋಜಕತ್ವ ನಡೆಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ 5 ವರ್ಷ ಪ್ರಾಯಕ್ಕಿಂತ ಕೆಳಗಿನ ವಯೋಮಾನದ 4511 ಮಂದಿ ಮಕ್ಕಳಿಗೆ ಬಿಂದು ಔಷಧ ನೀಡುವ ನಿಟ್ಟಿಬನಲ್ಲಿ 23 ವಾರ್ಡ್ ಗಳಲ್ಲಿ 40 ಬೂತ್ ಗಳು, 2 ಮೊಬೈಲ್ ಬೂತ್ ಗಳು ಸಿದ್ಧಗೊಂಡಿವೆ. ಬೆಳಗ್ಗೆ 8 ರಿಂದ ಸಂಜೆ 5 ಗಮಟೆ ವರೆಗೆ ಔಷಧ ವಿತರಣೆ ನಡೆಸಲಾಗುವುದು. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಇತರ ಸ್ವಯಂಸೇವಕರು ಈ ಸಂಬಂಧ ಬಂಗಾರದ ನಾಣ್ಯ ಕೂಪನ್ ವಿತರಣೆ ಈಗಾಗಲೇ ಆರಂಭಿಸಿದ್ದಾರೆ. ಫೆ.4ರಂದು ಚಿಟಿ ಎತ್ತುವಿಕೆ ಮತ್ತು ಬಂಗಾರದ ನಾಣ್ಯ ಪ್ರದಾನ ನಡೆಯಲಿದೆ.
ಈ ಸಂಬಂಧ ನಡೆದ ಸಮಾರಂಭದಲ್ಲಿ ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಕೂಪನ್ ಬಿಡುಗಡೆಗೊಳಿಸಿದರು. ಪಿ.ಎಚ್.ಎಲ್. ಸೂಪರ್ ವೈಸರ್ ಜೈನಮ್ಮ ಥಾಮಸ್ ಅವರು ಮೊದಲ ಕೂಪನ್ ಪಡೆದುಕೊಂಡರು. ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಅಕ್ಯೂರ್ ಡಯಾಗ್ನಿಸ್ಟಿಕ್ ಜನರಲ್ ಮೇನೆಜರ್ ಅಬ್ದುಲ್ ಖಾದರ್ ಕಾರಡ್ಕ, ಪಿ.ಎಚ್.ಎಲ್.ಎಸ್. ಶಾರದಾ, ಕಿರು ಆರೋಗ್ಯ ಇನ್ಸ್ ಪೆಕ್ಟರ್ ಗಳಾದ ವೈ.ಹರೀಶ್, ಕೆ.ಕೆ.ಆದರ್ಶ್, ಪಿ.ಆರ್.ಒ. ಕೀರ್ತನಾ ಎ., ಜೆ.ಪಿ.ಎಚ್.ಎಲ್.ಸಬೀನಾ ಉಪಸ್ಥಿತರಿದ್ದರು.