ಕಾಸರಗೋಡು: ಎಡನೀರು ಮಠಾಧೀಶರು, ಕೊಂಡೆವೂರು ಸ್ವಾಮಿಗಳು ಸೇರಿದಂತೆ ಜಿಲ್ಲೆಯ ಗಣ್ಯರು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನತೆಗೆ ಶುಭಾಶಯ ಕೋರಿದ್ದಾರೆ.
ಮಕರ ಸಂಕ್ರಾಂತಿ ಈ ಶುಭ ಸಂದರ್ಭದಲ್ಲಿ ಸಮಾಜದಲ್ಲಿ ಜನರ ಮಧ್ಯೆ ಸ್ನೇಹ, ಪ್ರೀತಿ, ಸೌಹಾರ್ದತೆ, ಬಾಂಧವ್ಯ ವೃದ್ಧಿಸಲಿ ಈ ಮೂಲಕ ದೇಶ ಸಮೃದ್ಧವಾಗಲಿ ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಉತ್ಸಾಹದಿಂದ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಭಾರತದ ವೈವಿಧ್ಯತೆ ಮತ್ತು ವಿವಿಧತೆಗೆ ಈ ಸಾಂಪ್ರದಾಯಿಕ ಆಚರಣೆ ಸಾಕ್ಷಿಯಾಗಿದೆ. ಭೂಮಿತಾಯಿಯನ್ನು ಗೌರವಿಸುವ ಸಂಕೇತ ಕೂಡ ಈ ಮಕರ ಸಂಕ್ರಾಂತಿಯಾಗಿದೆ, ಈ ಹಬ್ಬ ಎಲ್ಲರ ಬಾಳಲ್ಲಿ ಸುಖ, ಸಂತೋಷ ತರಲಿ ಎಂದು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಹರಸಿದ್ದಾರೆ.
ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ, ಸಂತಸ, ಸಮೃದ್ಧಿಗಳ ಹೊಂಗಿರಣ ಎಲ್ಲೆಡೆ ಪಸರಿಸಲಿ. ಈ ಸುಗ್ಗಿಕಾಲವು ಎಲ್ಲರಿಗೂ ಆರೋಗ್ಯ, ಯಶಸ್ಸು, ನಲಿವುಗಳನ್ನು, ವಿಶೇಷವಾಗಿ ಅನ್ನದಾತ ರೈತನಿಗೆ ನೆಮ್ಮದಿಯನ್ನು ಹೊತ್ತು ತರಲಿ, ನಾಡು ಪ್ರಗತಿ ಪಥದಲ್ಲಿ ಮುನ್ನಡೆಯಲಿ. ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತಿ ಶ್ರೀಗಳು ಶುಭ ಕೋರಿದ್ದಾರೆ.