ಹೈದರಾಬಾದ್: ಕೋವಿಡ್-19 ಗೆ ಕೋವ್ಯಾಕ್ಸಿನ್ ಲಸಿಕೆ ತಯಾರಿಸಿರುವ ಭಾರತ್ ಬಯೋಟೆಕ್ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಲಸಿಕೆಗೆ ಸಂಬಂಧಿಸಿದ ಫ್ಯಾಕ್ಟ್ ಶೀಟ್ ನ್ನು ಬಿಡುಗಡೆ ಮಾಡಿದ್ದು, ಜ್ವರ, ಗರ್ಭಿಣಿ, ಹಾಲೂಡಿಸುವ ತಾಯಂದಿರು, ರಕ್ತಸ್ರಾವ, ರಕ್ತ ತೆಳ್ಳಗಾಗಿಸುವುದಕ್ಕೆ ಔಷಧಗಳನ್ನು ಪಡೆಯುತ್ತಿರುವವರು ಲಸಿಕೆ ಪಡೆಯಬಾರದು ಎಂದು ಹೇಳಿದೆ.
ಲಸಿಕೆಯ ವೈದ್ಯಕೀಯ ಪರಿಣಾಮಕಾರಿತ್ವ ಇನ್ನಷ್ಟೇ ದೃಢಪಡಬೇಕಿದೆ, ಈ ಸಂಬಂಧ 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಅದೇ ರೀತಿ ಕೋವಿಡ್-19 ಲಸಿಕೆ ಪಡೆದ ಮಾತ್ರಕ್ಕೆ ಕೋವಿಡ್-19 ನಿಯಂತ್ರಕ ಕ್ರಮಗಳನ್ನು ಬಿಟ್ಟುಬಿಡಬಾರದು ಎಂದೂ ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.
ಅಲರ್ಜಿ ಇದ್ದಲ್ಲಿ, ಜ್ವರ, ರಕ್ತಸ್ರಾವ ಸಮಸ್ಯೆ, ಬ್ಲಡ್ ಥಿನ್ನರ್ ಗಳನ್ನು ಬಳಸುತ್ತಿದ್ದರೆ, ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಔಷಧಗಳನ್ನು ತೆಗೆದುಕೊಳ್ಳುತ್ತಿರುವವರು, ಗರ್ಭಿಣಿಯರು, ಹಾಲೂಡಿಸುತ್ತಿರುವ ಮಹಿಳೆಯರು, ಬೇರೆ ಕೋವಿಡ್-19 ಲಸಿಕೆ ಪಡೆದವರು, ಅಥವಾ ಇನ್ನಿತರ ಯಾವುದೇ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿರುವವರು ಕೋವ್ಯಾಕ್ಸಿನ್ ಲಸಿಕೆ ಪಡೆಯುವಂತಿಲ್ಲ ಎಂದು ಭಾರತ್ ಬಯೋಟೆಕ್ ಸಂಸ್ಥೆ ಸ್ಪಷ್ಟವಾಗಿ ತಿಳಿಸಿದೆ.
ಹಾಗೆಯೇ ಲಸಿಕೆ ಪಡೆಯುವ ವ್ಯಕ್ತಿ ಆತನಿಗೆ ಲಸಿಕೆ ನೀಡುವ ವೈದ್ಯಕೀಯ ಸಿಬ್ಬಂದಿಗಳ ಬಳಿ ತನ್ನ ಆರೋಗ್ಯದ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದೂ ಸಂಸ್ಥೆ ಹೇಳಿದೆ.