ಲಖನೌ: ಹಿಂದೂ ಜಾಗರಣ್ ಮಂಚ್‌ನ ನಾಯಕರು ಮತ್ತು ಕಾರ್ಯಕರ್ತರು ತಾಜ್‌ಮಹಲ್ ಒಳಗೆ ಕೇಸರಿ ಧ್ವಜಗಳನ್ನು ಹಿಡಿದು ಶಿವ ಚಾಲೀಸವನ್ನು ಪಠಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಘಟನೆಯ ಜಿಲ್ಲಾಧ್ಯಕ್ಷ ಗೌರ್ವನ್ ಠಾಕೂರ್ ಸೇರಿದಂತೆ ನಾಲ್ವರು ಸದಸ್ಯರನ್ನು ಪೊಲೀಸರು ನಂತರದಲ್ಲಿ ಬಂಧಿಸಿದ್ದಾರೆ. 'ಸೋಮವಾರ ಠಾಕೂರ್ ಸೇರಿದಂತೆ ಸಂಘಟನೆಯ ಆರು ಕಾರ್ಯಕರ್ತರು ತಾಜ್‌ಮಹಲ್ ಒಳಗೆ ಪ್ರವೇಶಿಸಿದ್ದು, ಅಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. ಇದರಲ್ಲಿದ್ದ ಕೆಲವರು ಶಿವ ಚಾಲೀಸವನ್ನೂ ಅಲ್ಲಿ ಪಠಿಸಿದ್ದಾರೆ' ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಘಟನೆ ನಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೊ ವೈರಲ್ ಆಗಿತ್ತು. ತಾಜ್‌ಮಹಲ್ ಭದ್ರತೆಯ ಹೊಣೆ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ(ಸಿಐಎಸ್‌ಎಫ್) ಸಿಬ್ಬಂದಿ ಠಾಕೂರ್ ಸೇರಿ ನಾಲ್ವರು ಕಾರ್ಯಕರ್ತರನ್ನು ಬಂಧಿಸಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ರಿಶಿ ಲವಾಣಿಯಾ, ಸೋನು ಬಘೇಲ್ ಹಾಗೂ ವಿಶೇಷ್ ಕುಮಾರ್ ಬಂಧಿತರು.
ಠಾಕೂರ್ ಕಳೆದ ವರ್ಷವೂ ತಾಜ್‌ಮಹಲ್ ಒಳಗೆ ಕೇಸರಿ ಧ್ವಜವನ್ನು ಹಾರಿಸಿ, ಶಿವ ಚಾಲೀಸ ಪಠಿಸಿದ್ದರು. ಸಂಘಟನೆಯ ಕಾರ್ಯಕರ್ತರು ಜಲಾಭಿಷೇಕ ನಡೆಸಲೂ ಪ್ರಯತ್ನಿಸಿದ್ದರು. 'ತಾಜ್‌ಮಹಲ್ ಇದ್ದ ಸ್ಥಳದಲ್ಲಿ ಶಿವಮಂದಿರವಿತ್ತು. ಷಹಜಹಾನ್ ಇದನ್ನು ಧ್ವಂಸ ಮಾಡಿ, ಮಸೀದಿ ಕಟ್ಟಿದ್ದರು. ನಮಗೆ ಇದು ಶಿವಮಂದಿರ. ನಾವು ಮೊದಲೂ ಇಲ್ಲಿ ಪೂಜೆಯನ್ನು ಮಾಡಿದ್ದೇವೆ' ಎಂದು ಠಾಕೂರ್ ಪ್ರತಿಪಾದಿಸಿದರು.