ಬೀಜಿಂಗ್: ಚೀನಾ ಸರ್ಕಾರದ ನೀತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಚೀನಾದ ಕೋಟ್ಯಧಿಪತಿ, ಉದ್ಯಮಿ ಜಾಕ್ ಮಾ ದಿಢೀರ್ ಕಣ್ಮರೆಯಾಗಿದ್ದಾರೆ.
ಕಳೆದೆರಡು ತಿಂಗಳುಗಳಿಂದ ಸಾರ್ವಜನಿಕವಾಗಿ ಜಾಕ್ ಮಾ ಕಾಣಿಸಿಕೊಂಡಿಲ್ಲ ಎನ್ನುವ ಸುದ್ದಿ ಇದೀಗ ಬಹಿರಂಗಗೊಂಡಿದ್ದು, ಇದರ ಹಿಂದಿನ ಕಾಣದ ಕೈ ಯಾವುದು ಎಂಬ ಬಗ್ಗೆ ಹಲವಾರು ಅನುಮಾನಗಳು ಸುಳಿದಾಡುತ್ತಿವೆ.
ಜಾಕ್ ಮಾ ಸಂಸ್ಥೆ ಮೂಲಕ ಶಿಕ್ಷಣ, ಉದ್ಯಮ, ಮಹಿಳಾ ನಾಯಕತ್ವ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿಗೆ ಅಪಾರ ಪ್ರಮಾಣದ ದೇಣಿಗೆ ಮೂಲಕ ನೆರವು ನೀಡಲಾಗುತ್ತಿದೆ. ನಮ್ಮ ದೇಶದಲ್ಲಿ ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಇದ್ದಂತೆಯೇ ಚೀನಾದಲ್ಲಿ ಆಲಿಬಾಬಾ ಡಾಟ್ ಕಾಮ್ ಪ್ರಸಿದ್ಧವಾಗಿದ್ದು, ಚೀನಾದ ಜನ ಶಾಪಿಂಗ್ ಗೆ ಪರ್ಯಾಯ ಹೆಸರಿಟ್ಟಿರೋದು ಆಲಿಬಾಬ. ಇದರ ಸ್ಥಾಪಕನೇ ಜಾಕ್ ಮಾ. ಕೊಡುಗೈ ದಾನಿಯೆಂದೇ ಗುರುತಿಸಿಕೊಂಡವರು ಇವರು.
ಅಕ್ಟೋಬರ್ 24ರಂದು ಚೀನಾ ಸರ್ಕಾರದ ನೀತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನಂತರ ಅವರ ಮೇಲೆ ಚೀನಾ ಸರ್ಕಾರದಿಂದ ಕಿರುಕುಳ ಹೆಚ್ಚಿತ್ತು. ಅಷ್ಟೇ ಅಲ್ಲದೇ ಅವರ ಆಯಂಟ್ ಸಂಸ್ಥೆಗೆ ನೀಡುವ ಅನುದಾನವನ್ನೂ ಕಡಿತಗೊಳಿಸಲಾಗಿತ್ತು.
ಪ್ರತಿಸಲವೂ ಆಫ್ರಿಕಾದ ಬಿಸಿನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಜಾಕ್ ಮಾ ಅವರು ಹಾಜರಾಗುತ್ತಿದ್ದರು. ಆಫ್ರಿಕಾದ ಉದ್ಯಮಿಗಳನ್ನು ಪ್ರೋತ್ಸಾಹಿಸಿ 1.5 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ನೀಡುವ ಷೋ ಇದಾಗಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್ ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಜಾಕ್ ಬದಲಿಗೆ ಬೇರೊಬ್ಬ ಅಧಿಕಾರಿಯನ್ನು ಆಲಿಬಾಬಾ ಸಂಸ್ಥೆ ಕಳಿಸಿತ್ತು. ಈಗ ಇವೆಲ್ಲವೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಅಕ್ಟೋಬರ್ 10ರಂದು ಕೊನೆಯ ಬಾರಿಗೆ ಟ್ವೀಟ್ ಮಾಡಿರುವ ಜಾಕ್ ಅವರು ಕೋವಿಡ್ 19 ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಮಾಸ್ಕ್ ವಿತರಣೆಗಾಗಿ ಯುರೋಪ್, ಯುಎಸ್ ಗಳಲ್ಲಿ ನೆರವು ನೀಡಿದ್ದರು.
ಸರಳ ವ್ಯಕ್ತಿತ್ವಕ್ಕೆ ಇನ್ನೊಂದು ಹೆಸರೇ ಜಾಕ್‌ಮಾ. ಈ ಪರಿಯ ಸಿರಿವಂತಿಕೆ ಇದ್ದರೂ ತನಗೆ ಎಂದು ಅಪಾರ ಆಸ್ತಿ ಏನೂ ಮಾಡಿಕೊಂಡಿಲ್ಲ ಜಾಕ್‌ಮಾ ಎನ್ನಲಾಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡೋದು. ಪುಸ್ತಕಗಳನ್ನು ಓದೋದು, ನೌಕರರ ಜೊತೆ ಸಿಕ್ಕಾಪಟ್ಟೆ ಹರಟುತ್ತಾ ಸೀದಾ ಸಾದಾ ಜೀವನ ನಡೆಸುತ್ತಿದ್ದಾರೆ. ಇಂಥ ಜಾಕ್‌ಮಾ ನಿಗೂಢ ಕಣ್ಮರೆ ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.