ಉಪ್ಪಳ: ಇನ್ನು ಮುಂದೆ ಕಾಸರಗೋಡು ಜಿಲ್ಲೆಯ ಮಾಂಸಾಹಾರ ಪ್ರಿಯ ಜನತೆಯ ಅಡುಗೆ ಮನೆ ಸೇರಲಿದೆ ಸುಭಿಕ್ಷ ಯೋಜನೆಯ ಮೂಲಕ ಲಭಿಸಲಿದೆ ವಿಷಾಂಶ ರಹಿತವಾದ ಆರೋಗ್ಯಕರ ಮೀನುಗಳು.
ಸ್ಥಳೀಯಾಡಳಿತ ಸಂಸ್ಥೆಗಳೂ, ಮೀನುಗಾರಿಕೆ ಇಲಾಖೆಯೂ ಜತೆಸೇರಿ ಶೇ 40 ಸರಕಾರಿ ಸಬ್ಸಿಡಿಯ ಜೊತೆ ರಾಜ್ಯಾದ್ಯಂತ ಜಾರಿಗೊಳಿಸುತ್ತಿರುವ ಸುಭಿಕ್ಷ ಕೇರಳಂ ಮೀನುಕೃಷಿ ಮೂಲಕ ಕಾಸರಗೋಡಿಗೂ ಈ ಸೌಲಭ್ಯ ಒದಗಲಿದೆ.
ಕಾಸರಗೋಡು ಜಿಲ್ಲೆಯಲ್ಲಿ 420 ಮಂದಿ ಕೃಷಿಕರು ಮೀನು ಸಾಕಣೆ ನಡೆಸುತ್ತಿದ್ದಾರೆ. ಇವರಲ್ಲಿ ಅಧಾರ್ಂಶ ಕೃಷಿಕರು ತಮ್ಮ ಹಿತ್ತಿಲಲ್ಲೇ ಮೀನುಕೃಷಿ ನಡೆಸುತ್ತಿದ್ದಾರೆ. 8 ತಿಂಗಳ ಅವಧಿಯಲ್ಲಿ ಒಂದು ಕಿಲೋದಷ್ಟು ತೂಕಹೊಂದುವ ಆಸಾಂ ಬಾಳೆ ಮೀನು ಇಲ್ಲಿ 2 ಸೆಂಟ್ಸ್ ಜಾಗದಲ್ಲಿ ನಿರ್ಮಿಸಲಾದ ಕೆರೆಯಲ್ಲಿ ಸಾಕಣೆ ನಡೆಸಲಾಗುತ್ತಿದೆ. ದೊಡ್ಡ ವೆಚ್ಚದ ತಿನಿಸನ್ನು ಬಯೋಫ್ಲಾಕ್ಸ್ ತಂತ್ರಜ್ಞಾನ ಮೂಲಕ ಶೇ 30 ಕಡಿತಗೊಳಿಸಲು ಸಾಧ್ಯವಾಗಿರುವುದು ಇಲ್ಲಿನ ವಿಶೇಷತೆಯಾಗಿದೆ. ಮೀನು ಕೃಷಿಯ ಬಹುತೇಕ ತಿನಿಸಿನ ಮೂಲಕ ನೀರಿಗೆ ಸೇರುವ ಅಮೋನಿಯಂ, ಬಾಕ್ಟೀರಿಯಾ ಕಾರ್ಬೋ ಹೈಡ್ರೇಟ್(ಮರಗೆಣಸಿನ ಪುಡಿ, ಸಕ್ಕರೆ) ಬಳಸಿ ಮೈಕ್ರೋಬಿಯನ್ ಪೆÇ್ರೀಟೀನ್ ಆಗಿ ಪರಿವರ್ತಿಸಲಾಗುತ್ತದೆ. ಈ ಮೂಲಕ ಕೃಷಿಯಾದ್ಯಂತ ಮೀನಿಗೆ ಬೇಕಾಗಿರುವ ತಿನಿಸು ಟಾಂಕಿಯಲ್ಲೇ ಲಭ್ಯವಾಗಲಿದೆ. 21 ಘನ ಮೀಟರ್ ವ್ಯಾಪ್ತಿಯ ಟಾಂಕಿ ಯಲ್ಲಿ 1250 ನೈಲ್ ತಿಲಾಪ್ಪಿಯ (ಗಿಫ್ಟ್/ಚಿತ್ರಲಾಡ) ಮರಿಗಳನ್ನು ಯೋಜನೆಯ ಅಂಗವಾಗಿ ಹೂಡಲಾಗುತ್ತದೆ. 6 ತಿಂಗಳ ಅವಧಿಯಲ್ಲಿ 400 ರಿಂದ 500 ಗ್ರಾಂ ತೂಕವುಳ್ಳವಾಗಿ ಇವನ್ನು ನಿರೀಕ್ಷಿಸಲಾಗುತ್ತದೆ. ಈ ಸಂಕರ ಜಾತಿಯ ಕೃಷಿ ನಡೆಸಿದರೆ ಒಂದೇ ವರ್ಷದಲ್ಲಿ ಕೊಯ್ಲು ಸಾಧ್ಯವಾಗುತ್ತದೆ.
ಕರಿ ಮೀನು ಮತ್ತು ಕಾಳಂಜಿ:
ಕೆರೆಗಳಲ್ಲಿ ಕರಿ ಮೀನು ಕೃಷಿ ಗಮನಾರ್ಹವಾಗಿದೆ. ಯೋಜನೆಯ ಮೂಲಕ 50 ಸೆಂಟ್ಸ್ ಕರೆಯಲ್ಲಿ ಕರಿಮೀನು ಕೃಷಿ ನಡೆಸಲಾಗುತ್ತದೆ. 1500 ಮೀನುಮರಿಗಳ ಜೊತೆ 6 ಕಿಲೋ ತೂಕದ ಮೀನುಗಳ ಹೂಡಿಕೆ ಮೂಲಕ ಉತ್ತಮ ತಳಿಯ ಮೀನುಗಳ ಜನನ ಸಾಧ್ಯವಾಗುತ್ತದೆ.
ಹಿನ್ನೀರಿನ ಗೂಡು ಕೃಷಿ ಕೂಡ ಸುಭಿಕ್ಷ ಕೇರಳಂ ಯೋಜನೆಯ ಮತ್ತೊಂದು ಗಮನ ಸೆಳೆಯುವ ಯೋಜನೆಯಾಗಿದೆ. ಇಂದು ಮಾರುಕಟ್ಟೆಯಲ್ಲಿ ಧಾರಾಳ ಬೇಡಿಕೆಯಿರುವ ಕಾಳಂಜಿ(ಕೋಳನ್), ಚೆನ್ನಲ್ಲಿ, ಕರಿಮೀನು ಈ ಮೂಲಕ ಹೇರಳವಾಗಿ ಬೆಳೆಯಲಾಗುತ್ತದೆ.
ಜಿಲ್ಲೆಯಲ್ಲಿ 300 ಟನ್ ಮೀನು ಉತ್ಪಾದನೆಯ ನಿರೀಕ್ಷೆ:
ಸುಭಿಕ್ಷ ಕೇರಳಂ ಯೋಜನೆಯಲ್ಲಿ ಮಾತ್ರ ಸರಿಸುಮಾರು 300 ಟನ್ ಮೀನು ಉತ್ಪಾದನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ನಿರೀಕ್ಷಿಸಲಾಗುತ್ತಿದೆ. ಕೋವಿಡ್ ಮಹಾಮಾರಿಯ ಅವಧಿಯಲ್ಲಿ ನೌಕರಿ ಕಳೆದುಕೊಂಡಿರುವ ಆನಿವಾಸಿ ಭಾರತೀಯರು ಮತ್ತು ಯುವಜನತೆ ಸುಭಿಕ್ಷ ಕೇರಳಂ ಯೋಜನೆಯ ಮೂಲಕ ನೂತನ ಸಾಧ್ಯತೆ ಕಮಡುಕೊಳ್ಳುತ್ತಿದ್ದಾರೆ. ಅದರಲ್ಲೂ ಮೀನುಕೃಷಿಯಲ್ಲಿ ಗೃಹಿಣಿಯರು ಹೆಚ್ಚುವರಿ ಆಸಕ್ತಿ ತೋರುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಸುಭಿಕ್ಷ ಕೇರಳಂ ಯೋಜನೆಯ ಮೂಲಕ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ 136 ಬಯೋ ಫ್ಲಾಕ್ ಕೃಷಿಕರನ್ನು, 271 ಮನೆ ಹಿತ್ತಿಲ ಕೆರೆಗಳಲ್ಲಿ ಮೀನು ಕೃಷಿಕರನ್ನು , 2 ಕೆರೆಗಲಲ್ಲಿ ಕರಿಮೀನು ಕೃಷಿಕರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಯೋಜನೆಯಲ್ಲೂ ಶೇ 95 ಕ್ಕಿಂತ ಅಧಿಕ ಕೃಷಿಕರು ಈಗಾಗಲೇ ಮೀನು ಮರಿಗಳ ಹೂಡಿಕೆ ನಡೆಸಿದ್ದಾರೆ. ಜನವರಿ ತಿಂಗಳ ಕೊನೆಯಲ್ಲಿ ಎಲ್ಲ ಕೃಷಿಕರೂ ಮೀನು ಮರಿಗಳ ಹುಡಿಕೆಯಲ್ಲಿ ಪರಿಪೂರ್ಣತೆ ಸಾಧಿಸಲಿದ್ದಾರೆ.
ಮನೆಯಂಗಳದಲ್ಲೇ ಕೆರೆ:
ಸ್ವಂತ ಮನೆಯಂಗಳದಲ್ಲೇ ನಿರ್ಮಿಸಲಾದ ಜಲಶಯದಲ್ಲಿ ಬಯೋಫ್ಲಾಕ್ಸ್ ಕೃಷಿ ನಡೆಸಬಹುದಾಗಿದೆ. 2 ಸೆಂಟ್ಸ್ ಜಾಗದಲ್ಲಿ ಕೆರೆ ನಿರ್ಮಿಸಿ ಈ ಮೀನಿನ ಕೃಷಿ ನಡೆಸಬಹುದು. ಕರಿಮೀನು ಕೃಷಿಗೆ 50 ಸೆಂಟ್ಸ್ ಜಾಗದ ಕೆರೆ ಸಾಲುತ್ತದೆ. ಕಾಸರಗೋಡು ಜಿಲ್ಲೆಯಲ್ಲಿ 136 ಬಯೋ ಫ್ಲಾಕ್ಸ್ ಯೂನಿಟ್ ಗಳಿಂದ ಒಂದು ವರ್ಷದ ಅವಧಿಯಲ್ಲಿ 80 ರಿಂದ 100 ಟನ್ ಮೀನುಗಳ ಉತ್ಪಾದನೆ ಸಾಧ್ಯ. ಮಾರುಕಟ್ಟೆಯಲ್ಲಿ ಕಿಲೋಗೆ 120 ರಿಂದ 300 ರೂ. ಬೆಲೆ ಹೊಂದಿರುವ ಮೀನುಗಳ ಮೂಲಕ ಕೃಷಿಕರಿಗೆ ಉತ್ತಮ ಆದಾಯವೂ ಲಭಿಸಲಿದೆ. ಹಿತ್ತಿಲ ಕೆರೆಗಾಗಿ 2 ಸೆಂಟ್ಸ್ ಜಾಗದ ವಿಸ್ತೀರ್ಣದಲ್ಲಿ ಕರೆ ನಿರ್ಮಿಸಬೇಕು. ಇದಕ್ಕಾಗಿ 271 ಕೃಷಿಕರು ಜಿಲ್ಲೆಯಲ್ಲಿ ಒಟ್ಟು 2.19 ಹೆಕ್ಟೇರ್ ಜಾಗದಲ್ಲಿ ಕೆರೆ ನಿರ್ಮಿಸುತ್ತಿದ್ದಾರೆ. ಒಂದು ವರ್ಷದ ಯೋಜನೆಯಿಂದ 217ರಿಂದ 271 ಟನ್ ವರೆಗೆ ಆಸಾಂ ಬಾಲೆ ಮೀನು ಉತ್ಪಾದಿಸುವ ನಿರೀಕ್ಷೆಯಿದೆ.
ಸುಭಿಕ್ಷ ಕೇರಳಂ ಮೀನು ಕೃಷಿ:
ಕಾಸರಗೋಡು ಜಿಲ್ಲೆಯಲ್ಲಿ ಜನತೆ ಆಹಾರ ಸುರಕ್ಷೆಯ ಜೊತೆಗೆ ಉತ್ತಮ ಆದಾಯವನ್ನೂ ಸುಭಿಕ್ಷ ಕೇರಳಂ ಯೋಜನೆ ಮೂಲಕ ಪಡೆಯಬಹುದಾಗಿದೆ. ಉತ್ತಮ ಗುಣಮಟ್ಟದ ಜಲಾಶಯ, ಉತ್ತಮ ಗುಂಟ್ಟದ ಮೀನುಗಳ ಲಭ್ಯತೆ, ಅಗತ್ಯಕ್ಕೆ ಬೇಕಾದಷ್ಟು ಜಾಗ ಮೀನುಕೃಷಿಗೆ ಮೂಲಭೂತ ವಿಚಾರಗಳು. ಉತ್ಪಾದನೆಯ ಪ್ರಮಾಣ ಅನುಸರಿಸಿ ಮೀನು ಕೃಷಿಯನ್ನು ಮೂರು ವಿಭಾಗಗಳಾಗಿಸಲಾಗಿದೆ. ವಿಶಾಲ ಮೀನು ಕೃಷಿ, ಅರೆ ಕೃಷಿ, ವಿಜ್ಞಾನ-ತಂತ್ರಜ್ಞಾನ ಬಳಸಿ ಮೀನು ಕೃಷಿ. ಸುಭಿಕ್ಷ ಕೇರಳಂ ಯೋಜನೆ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ 4 ವಿಧದ ಮೀನು ಕೃಷಿ ರೀತಿ ಜಾರಿಯಲ್ಲಿದೆ. 1. ಮನೆ ಹಿತ್ತಿಲಲ್ಲಿ ಮೀನು ಕೃಷಿ, 2. ಬಯೋ ಫ್ಲಾಕ್ಸ್ ಮೀನು ಕೃಷಿ, 3. ಕೆರೆಗಳಲ್ಲಿ ಕರಿಮೀನು ಕೃಷಿ, 4. ಏಕಜಲ ಗೂಡು ಕೃಷಿ.
ಅಭಿಮತ:
ಕೋವಿಡ್ ಲಾಕ್ ಡೌನ್ ಸಂದರ್ಭ ಮನೆಯಲ್ಲಿ ಕಾಲಹರಣ ಮಾಡುತ್ತಿದ್ದಾಗ ತನ್ನ ಖಾಸಗೀ ಭೂಮಿಯಲ್ಲಿ ಮೀನು ಕೃಷಿ ಮಾಡೋಣವೆಂಬ ಆಲೋಚನೆ ಬಂದು ಆರಂಭಿಸಲಾಯಿತು. ಜಿಲ್ಲೆಯ ದಕ್ಷಿಣ ವ್ಯಾಪ್ತಿಯಲ್ಲಿ ಮೀನು ಕೃಷಿ ಬಹಳಷ್ಟಿದ್ದು, ಮಂಜೇಶ್ವರ ವ್ಯಾಪ್ತಿಯಲ್ಲಿ ಇರಲಿಲ್ಲ.ಆರಂಭದಲ್ಲಿ ಒಂದಷ್ಟು ಮಾಹಿತಿಗೆ ಕಷ್ಟವಾದರೂ ಬಳಿಕ ಕಲಿತುಕೊಳ್ಳಲಾಯಿತು.ಆ ಬಳಿಕ ತಾಲೂಕು ವ್ಯಾಪ್ತಿಯ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಇದೀಗ ಇತರರು ನಮ್ಮಿಂದ ಪ್ರೇರಣೆಗೊಂಡು ಆರಂಭಿಸಿದ್ದಾರೆ. ನಾವು ಮೀನು ಮರಿಗಳ ಮಾರಾಟ ಮಾಡುತ್ತಿದ್ದೇವೆ. ಜೊತೆಗೆ ಮೀನು ಬೆಳೆಸುವ ನೀರು ಬಳಸಿ ತರಕಾರಿ ಕೃಷಿಗೆ ಬಳಸುತ್ತಿದ್ದು ಉತ್ತಮ ಫಲಿತಾಂಶವಿದೆ.
-ಅಶ್ವಥ್ ಪೂಜಾರಿ ಲಾಲ್ ಭಾಗ್.ಪೈವಳಿಕೆ.
ಮೀನು ಘಟಕದ ರೂವಾರಿ,ಪೈವಳಿಕೆ ಸೇ.ಸ.ಬ್ಯಾಂಕ್ ಅಧ್ಯಕ್ಷ.