ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ತೀವ್ರ ಹಣಾಹಣಿ ನಡೆಯುವ ಸಾಧ್ಯತೆಯಿರುವ ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದೆ.
ಇದು ಈ ವರ್ಷದ ಮೊದಲ ಸಂಸತ್ ಕಲಾಪವಾಗಿದ್ದು, ಮೊದಲ ದಿನ ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡುತ್ತಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ಜಂಟಿ ಅಧಿವೇಶನ ಅತ್ಯಗತ್ಯವಿತ್ತು. ಹೊಸ ವರ್ಷ, ಹೊಸ ದಶಕದ ಮೊದಲ ಅಧಿವೇಶನ ಇದಾಗಿದ್ದು, ಸಂಸತ್ತಿನ ಈ ಅಧಿವೇಶನ ಅತ್ಯಂತ ಮಹತ್ವಪೂರ್ಣವಾಗಿದೆ. ಸವಾಲುಗಳನ್ನು ಎದುರಿಸಿ ಭಾರತ ಮುನ್ನಡೆಯುತ್ತಿದೆ. ಭಾರತ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸಿದೆ. ಎಲ್ಲಾ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಆರಂಭವಾದ ದಿನಗಳಲ್ಲಿ ನಾವು ಸಾಕಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಕೊರೋನಾ ಸಂದರ್ಭದಲ್ಲಿಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನಿಧನ ಹೊಂದಿದ್ದರು. ಕೊರೋನಾದಿಂದ 6 ಸಂಸದರು ನಮ್ಮನ್ನು ಅಗಲಿದರು. ಎಲ್ಲರಿಗೂ ನಾನು ಗೌರವ ನಮನ ಸಲ್ಲಿಸುತ್ತೇನೆ.
ನಮ್ಮ ಸರ್ಕಾರ ತೆಗೆದುಕೊಂಡ ಸಮಯೋಚಿತ ನಿರ್ಧಾರವು ಲಕ್ಷಾಂತರ ನಾಗರೀಕರ ಜೀವವನ್ನು ಉಳಿಸಿದೆ ಇದು ನನಗೆ ತೃಪ್ತಿ ತಂದಿದೆ. ಇಂದು ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದ ವಿಶ್ವದಲ್ಲಿಯೇ ಅತೀ ದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ವಿಚಾರ. ಎರಡು ಲಸಿಕೆಗಳು ಸ್ವದೇಶಿ ನಿರ್ಮಿತ ಲಸಿಕೆಗಳಾಗಿವೆ.
ಕೇಂದ್ರ ಸರ್ಕಾರ ಎಲ್ಲಾ ವರ್ಗಗಳ ಕಲ್ಯಾಣಕ್ಕೆ ಕೆಲಸ ಮಾಡುತ್ತಿದೆ. ಆತ್ಮನಿರ್ಭರತೆಯತ್ತ ನಾವು ವೇಗವಾಗಿ ಮುನ್ನಡೆಯಬೇಕು. ಕೊರೋನಾ ಸಂದರ್ಭದಲ್ಲಿ ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ. ನಮ್ಮ ಒಂದು ಕೈಯಲ್ಲಿ ಕರ್ತವ್ಯ, ಮತ್ತೊಂದು ಕೈಯಲ್ಲಿ ಯಶಸ್ಸಿದೆ. ಕೊರೋನಾ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ. ಕೊರೋನಾ ಲಸಿಕೆ ವಿಚಾರದಲ್ಲಿ ಭಾರತ ಆತ್ಮನಿರ್ಭರವಾಗಿದೆ. ಇದೀಗ ಭಾರತ ವಿದೇಶಗಳಿಗೆ ಕೊರೋನಾ ಲಸಿಕೆ ಪೂರೈಸುತ್ತಿದೆ.
ಈ ಬಿಕ್ಕಟ್ಟಿನಲ್ಲಿಯೂ ಭಾರತ ಮಾನವೀಯತೆಯನ್ನು ತೋರಿದೆ. ಹಲವಾರು ರಾಷ್ಟ್ರಗಳಿಗೆ ಲಕ್ಷಾಂತರ ಲಸಿಕೆಗಳನ್ನು ನೀಡಿದೆ. ಜನೌಷಧ ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಔಷಧ ನೀಡಲಾಗಿದೆ. ದೇಶದಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಸಹಾಯವಾಗುತ್ತಿದೆ. ಬಡವರಿಗೆ ರೂ.5 ಲಕ್ಷದವರೆಗೂ ಉಚಿತ ಚಿಕಿತ್ಸೆ ಸಿಗುತ್ತಿದೆ. ದೇಶದಲ್ಲಿ ಇದೀಗ 562 ವೈದ್ಯಕೀಯ ಕಾಲೇಜುಗಳಿವೆ. ರೈತರ ಉತ್ಪನ್ನಕ್ಕೆ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡಲು ನಿರ್ಧಾರ ಹಾಗೂ ನೀರಾವರಿ ಯೋಜನೆಗಳಲ್ಲಿ ಸುಧಾರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗಣರಾಜ್ಯೋತ್ಸವ ದಿನ ಹಿಂಸಾಚಾರ: ರಾಷ್ಟ್ರಪತಿ ಕೋವಿಂದ್ ಖಂಡನೆ
ಗಣರಾಜ್ಯೋತ್ಸವ ದಿನದ ಅಪಮಾನ ದೌರ್ಭಾಗ್ಯಪೂರ್ಣ. ರಾಷ್ಟ್ರಧ್ವಜ ಮತ್ತು ಗಣರಾಜ್ಯೋತ್ಸವದ ಪವಿತ್ರ ದಿನವನ್ನೇ ಅವಮಾನಿಸಲಾಯಿತು. ಸಂವಿಧಾನವು ನಮಗೆ ವಾಕ್ ಸ್ವಾತಂತ್ರ್ಯ ನೀಡುತ್ತದೆ. ಅದೇ ಸಂವಿಧಾನವು ಕಾನೂನು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದೂ ಕೂಡ ಹೇಳುತ್ತದೆ.
ಕೃಷಿ ಕಾಯ್ದೆಗಳ ಜಾರಿಗೆ ಮುನ್ನ ರೈತರಿಗೆ ನೀಡಲಾಗಿದ್ದ ಹಕ್ಕುಗಳನ್ನು ಕಸಿಯುವುದಿಲ್ಲ. ಬದಲಿಗೆ ಹೆಚ್ಚುವರಿ ಸೌಲಭ್ಯ, ಹಕ್ಕುಗಳನ್ನು ಕೃಷಿ ಕಾಯ್ದೆಗಳ ಮೂಲಕ ನೀಡಲಾಗಿದೆ.
ಸಣ್ಣ ರೈತರಿಗೆ ದೊಡ್ಡ ರೈತರಷ್ಟೇ ಆದಾಯ ಸಿಗುವಂತಾಗಬೇಕು. ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. 100ಕ್ಕೂ ಹೆಚ್ಚು ಕೃಷಿ ರೈಲುಗಳನ್ನು ಓಡಿಸಲಾಗುತ್ತಿದೆ. ಡೇರಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅನ್ನದಾತರನ್ನು ಇಂಧನದಾತರನ್ನಾಗಿಯೂ ಮಾಡಲಾಗುತ್ತಿದೆ. ಇಥೆನಾಲ್ ಉತ್ಪಾದನೆಯಿಂದ ರೈತರ ಆದಾಯ ಹೆಚ್ಚಾಗಲಿದೆ.
ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಗ್ರಾಮಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ದೇಶದ ಕಾನೂನನ್ನು ಗಂಭೀರವಾಗಿ ಪಾಲಿಸುವ ಅಗತ್ಯವಿದೆ.
ಕೃಷಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದೆ. ಕೆಂಪುಕೋಟೆಯಲ್ಲಿ ಧ್ವಜಕ್ಕೆ ಅಪಮಾನ ದೌರ್ಭಾಗ್ಯಪೂರ್ಣ. ಸಣ್ಣ ಉದ್ಯಮಗಳನ್ನು ಸಶಕ್ತಗೊಳಿಸಲಾಗುತ್ತಿದೆ. 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.