ನವದೆಹಲಿ: ನವದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಸ್ಥಳದಲ್ಲಿ ತನಿಖೆ ನಡೆಸುತ್ತಿರುವ ಭದ್ರತಾ ಸಿಬ್ಬಂದಿಗೆ ಇಸ್ರೇಲ್ ರಾಯಭಾರಿಗೆ ಸಂಬಂಧಿಸಿದಂತೆ ಬರೆದ ಪತ್ರವೊಂದು ಮುಚ್ಚಿದ ಲಕೋಟೆಯಲ್ಲಿ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸ್ಫೋಟದ ಸ್ಥಳದಲ್ಲೇ ಸಿಕ್ಕ ಪತ್ರದಲ್ಲಿ ಇಸ್ರೇಲ್ ರಾಯಭಾರಿ ಕಚೇರಿಗೆ ಸಂಬಂಧಿಸಿದಂತೆ ಬರೆಯಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಆ ಪತ್ರಕ್ಕೂ ಶುಕ್ರವಾರ ಸಂಭವಿಸಿದ ಸ್ಫೋಟಕ್ಕೂ ಸಂಬಂಧವಿದೆಯೇ ಇಲ್ಲವೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಮ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಸೇರಿದಂತೆ ಕೆಲವು ವಾಹನಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಸ್ಫೋಟದ ಹಿಂದಿನ ಆತಂಕಕ್ಕೆ ಕಾರಣವೇನು?:
ಇಸ್ರೇಲ್ ರಾಯಭಾರಿ ಕಚೇರಿಯಿಂದ ಕೇವಲ ಒಂದೂವರೆ ಕಿ.ಮೀ ದೂರದಲ್ಲಿ ಭಾರತದ 72ನೇ ಗಣರಾಜ್ಯೋತ್ಸವದ ಹಿನ್ನೆಲೆ ಬೀಟಿಂಗ್ ರಿಟ್ರೀಟ್ ಸಂಭ್ರಮಾಚರಣೆ ಆಚರಿಸಲಾಗುತ್ತಿತ್ತು. ಈ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಪ್ರಮುಖ ವಿವಿಐಪಿಗಳು ಭಾಗವಹಿಸಿದ್ದರು. ಇಂಥ ಸಂದರ್ಭದಲ್ಲಿ ಈ ಪ್ರದೇಶದಿಂದ ಕೇವಲ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿರುವುದಕ್ಕೆ ಆತಂಕ ಹೆಚ್ಚಿದೆ.
ಭಾರತೀಯ ವಿದೇಶಾಂಗ ಸಚಿವರ ಸ್ಪಷ್ಟನೆ:
ಶುಕ್ರವಾರ ಸಂಭವಿಸಿದ ಸ್ಫೋಟ ಪ್ರಕರಣವನ್ನು ಭಾರತ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ. ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟದ ಬಗ್ಗೆ ಇಸ್ರೇಲ್ ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಜೊತೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ದೂರವಾಣಿ ಮೂಲಕ ಚರ್ಚೆ ನಡೆಸಿದರು. ನಂತರ ಪ್ರತಿಕ್ರಿಯೆ ನೀಡಿರುವ ಸಚಿವ ಜೈಶಂಕರ್ ಅವರು, ಇಸ್ರೇಲ್ ರಾಯಭಾರಿ ಮತ್ತು ರಾಜತಾಂತ್ರಿಕರು ಹಾಗೂ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡಿದರು.