ನವದೆಹಲಿ: 'ರೂಪಾಂತರ ಕೊರೊನಾವೈರಸ್ ಸಮಸ್ಯೆ ಈ ಹೊತ್ತಿಗೆ ಮುಗಿಯುವುದಿಲ್ಲ, ಆದರೆ ಭವಿಷ್ಯದಲ್ಲಿ ಈ ವೈರಸ್‌ಗಳು ಉಂಟು ಮಾಡುವ ಸಮಸ್ಯೆಯನ್ನು ತಡೆಗಟ್ಟುವುದಕ್ಕೆ ಇದು ಸಕಾಲವಾಗಿದೆ' ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕೆಲವು ರಾಷ್ಟ್ರಗಳು ಲಸಿಕೆ ಸಿದ್ಧಪಡಿಸುವಲ್ಲಿ ನಿರತವಾಗಿವೆ. ಲಸಿಕೆ ತಯಾರಿಕೆ ಮತ್ತು ಪೂರೈಕೆ ಜತೆಗೆ, ಮೊದಲ ಪೀಳಿಗೆಯನ್ನು ಸೋಂಕಿನಿಂದ ರಕ್ಷಿಸುತ್ತಾ, ಸಂಭವನೀಯವಾಗಿ ರೂಪಾಂತರಗೊಳ್ಳುವ ವೈರಸ್ ಅನ್ನು ನಿಯಂತ್ರಿಸಲು ಸಜ್ಜಾಗಬೇಕು ಎಂದು ತಜ್ಞರು ಹೇಳಿದ್ದಾರೆ.
ರೂಪಾಂತರ ಕೊರೊನಾವೈರಸ್‌ಗಳು ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪ್ರಸ್ತುತ ನೀಡುತ್ತಿರುವ ಲಸಿಕೆಗಳ ಪರಿಣಾಮದ ಕುರಿತು ಪ್ರತಿಕ್ರಿಯಿಸಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿಯ ವಿಜ್ಞಾನಿ ಸತ್ಯಜಿತ್ ರಾಥ್ , 'ಲಸಿಕೆ ನಿರೋಧಕ ರೂಪಾಂತರ ವೈರಸ್‌ಗಳು ಇರುವುದಿಲ್ಲ ಅಥವಾ ರೂಪಾಂತರಗೊಳ್ಳುವ ವೈರಸ್‌ಗಳು ತೀವ್ರತರವಾಗಿ ಸೋಂಕು ಹರಡುವುದಿಲ್ಲ' ಎಂದು ಹೇಳಿದರು.
ಪ್ರಸ್ತುತ ಲಸಿಕೆ ಅಭಿಯಾನವು ಸಾಂಕ್ರಾಮಿಕ ರೋಗವನ್ನು ನಿಧಾನಗೊಳಿಸಲು ಸಹಕಾರಿಯಾಗುತ್ತದೆಯಾದರೂ, ಹೊಸ ರೂಪಾಂತರದ ವೈರಸ್‌ಗಳನ್ನು ಎದುರಿಸುವಂತಹ ಲಸಿಕೆಯನ್ನು ಅಭಿವೃದ್ಧಿಪಡಿಸಲು ಈಗಿನಿಂದಲೇ ಪ್ರಯತ್ನಿಸಬೇಕಾಗಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.