ಕುಂಬಳೆ: ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯ ಹೊಸ ಕಟ್ಟಡದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು ಕುಂಬಳೆ ಪ್ರೆಸ್ ಪೋರಂ ನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಶಿಬಿರವು ಜ. ೨೮ ರ ಗುರುವಾರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ರವರೆಗೆ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ. ಡಾ. ಮೊಹಮ್ಮದ್ ಷರೀಫ್ ವಿ (ಜನರಲ್ ವಿಭಾಗ), ಡಾ.ಅಹಮ್ಮದ್ ರಶೀದ್ (ಮಕ್ಕಳ ವೈದ್ಯ), ಡಾ. ಸಂದೀಪ್ ಕೆ. ಡಾ. ಆರ್. ಭಟ್ (ಆರ್ಥೋಪೆಡಿಸ್ಟ್), ಮುಬೀನಾ ಬೇಗಂ (ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ), ಡಾ. ಸಂದೀಪ್ ಕೆ.ಕೆ. (ಜನರಲ್ ಲ್ಯಾಪರೊಸ್ಕೋಪಿಕ್ ಸರ್ಜನ್), ಡಾ.ಸಾವಿತ್ರಿ ಎಸ್. ರಾಜ್ (ಚರ್ಮರೋಗ ವೈದ್ಯೆ) ಮೊದಲಾದ ಪ್ರಮುಖ ವೈದ್ಯರು ಶಿಬಿರದಲ್ಲಿ ರೋಗಿಗಳನ್ನು ಪರೀಕ್ಷಿಸಲಿದ್ದಾರೆ. ೧೯೯೦ ರಲ್ಲಿ ಬಾಡಿಗೆ ಕಟ್ಟಡದಲ್ಲಿ ೨೦ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ಜಿಲ್ಲಾ ಸಹಕಾರಿ ಆಸ್ಪತ್ರೆ ಪ್ರಸ್ತುತ ಕುಂಬಳೆ ಮತ್ತು ಚೆಂಗಳದಲ್ಲಿ ೨೦ ಕ್ಕೂ ಹೆಚ್ಚು ವೈದ್ಯರು ಮತ್ತು ೨೫೦ ಕ್ಕೂ ಹೆಚ್ಚು ಸಿಬ್ಬಂದಿಯೊAದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಂಡಳಿಯ ಸದಸ್ಯರು ತಿಳಿಸಿದ್ದಾರೆ. ಶಿಬಿರವನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸುವಂತೆ ಸಂಬAಧಪಟ್ಟವರು ವಿನಂತಿಸಿದ್ದಾರೆ.
ಆಸ್ಪತ್ರೆಯ ಅಧ್ಯಕ್ಷ ಎ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಪಿ.ರಘುದೇವನ್ ಮಾಸ್ತರ್ ಉಪಸ್ಥಿತರಿರುವರು. ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಸುಬ್ಬಣ್ಣ ಅಳ್ವ, ಕಾಸರಗೋಡು ವಲಯ ಕೋ-ಆಪರೇಟಿವ್ ಯೂನಿಯನ್ ಅಧ್ಯಕ್ಷ ಕೆ.ಆರ್.ಜಯಾನಂದ, ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸಹಾಯಕ ರಿಜಿಸ್ಟ್ರಾರ್ ಕೆ. ರಾಜಗೋಪಾಲ್, ಕುಂಬಳೆ ಪಂಚಾಯತಿ ಸದಸ್ಯೆ ಪ್ರೇಮಾವತಿ, ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಮೇಲ್ವಿಚಾರಕ ಬಿ. ಮುಹಮ್ಮದ್ ಶರೀಫ್ ಅತಿಥಿಗಳಾಗಿ ಉಪಸ್ಥಿತರಿರುವರು. ಸಹಕಾರಿ ಆಸ್ಪತ್ರೆಯ ಅಧ್ಯಕ್ಷ ಎ. ಚಂದ್ರಶೇಖರನ್, ಕಾರ್ಯದರ್ಶಿ ಜಿ. ರತ್ನಾಕರ, ಆಡಳಿತಾಧಿಕಾರಿ ಡಿ.ಆರ್. ರಾಧಾಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.