ಪೆರ್ಲ: ಹುಬ್ಬಳ್ಳಿಯ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಕೊಡಮಾಡುವ ಅರಳು ಮೊಗ್ಗು ಪ್ರಶಸ್ತಿಗೆ ಕಾಸರಗೋಡಿನ ಯುವ ಪ್ರತಿಭೆ ಸನ್ನಿಧಿ ಟಿ.ರೈ ಪೆರ್ಲ ಅವರ ಅಮರಾವತಿ ಪೌರಾಣಿಕ ಯಕ್ಷಗಾನ ಪ್ರಸಂಗ ಕೃತಿ ಪಾತ್ರವಾಗಿದೆ.
ಜ.10 ರಂದು ಸಂಜೆ 4 ಗಂಟೆಗೆ ಶಿಶುನಾಳದ ಶ್ರೀ ಗುರು ಗೋವಿಂದ ಭಟ್ಟ ಹಾಗು ಶ್ರೀ ಸಂತ ಶಿಶುನಾಳ ಶರೀಫ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ರಾಜ್ಯ ಸಭೆಯ ಮಾಜಿ ಸದಸ್ಯೆ, ಖ್ಯಾತ ರಂಗಕರ್ಮಿ ಬಿ.ಜಯಶ್ರೀ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಕಾಸರಗೋಡಿನ ಚಿನ್ಮಯ ವಿದ್ಯಾಲಯದಲ್ಲಿ ಹನ್ನೊಂದನೆಯ ತರಗತಿಯಲ್ಲಿ ಓದುತ್ತಿರುವ ಸನ್ನಿಧಿ ಟಿ.ರೈ ಪೆರ್ಲ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ1 ಗ್ರೇಡ್ ಅಂಕ ಪಡೆದ ಪ್ರತಿಭಾನ್ವಿತೆ. ಅದಕ್ಕೆ ಮಿಗಿಲಾಗಿ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕøತಿಕ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾ ಸಂಪನ್ನೆ. ಈಗಾಗಲೇ ಚಿಲಿಪಿಲಿ ಚಿತ್ತಾರ, ಶೇಡ್ಸ್ ಇಂಗ್ಲೀಷ್ ಕವನ ಸಂಕಲನಗಳ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ಸನ್ನಿಧಿ 2018 ರಲ್ಲಿ ಅಮರಾವತಿ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ರಚಿಸುವ ಮೂಲಕ ತನ್ನ ಸೃಜನಶೀಲತೆಗೆ ಮತ್ತೊಂದು ದಿವ್ಯ ಸಾಕ್ಷಿ ಒದಗಿಸಿದ್ದಾಳೆ.