ಮಧುರೈ: ಕರೊನಾ ಬಂದಾಗಿನಿಂದ ಮದುವೆಯ ವ್ಯಾಖ್ಯಾನವೇ ಬದಲಾಗಿಬಿಟ್ಟಿದೆ. ಸಾವಿರಾರು ಜನರು ಸೇರಿ ಮಾಡುತ್ತಿದ್ದ ಮದುವೆ ಈಗ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಮನೆ ಮನೆಗೆ ಹೋಗಿ ಲಗ್ನ ಪತ್ರಿಕೆ ಕೊಟ್ಟು ಬರುತ್ತಿದ್ದ ಜನ ಇದೀಗ ವಾಟ್ಸ್ಆಯಪ್ನಲ್ಲೇ ಇ ಆಮಂತ್ರಣ ಕಳುಹಿಸಲಾರಂಭಿಸಿದ್ದಾರೆ. ಮದುವೆಗೆ ಬರುವ ಸಂಬಂಧಿಗಳಿಂದ ಉಡುಗೊರೆ ಸ್ವೀಕರಿಸಲೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದಿದೆ. ಹಾಗಿದ್ದಾಗ ಉಡುಗೊರೆ ಕೊಡಲು ಬಯಸುವವರಿಗೆ ಲಗ್ನ ಪತ್ರಿಕೆಯಲ್ಲೇ ಗೂಗಲ್ ಪೇ, ಫೋನ್ ಪೇ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟರೆ?
ಈ ರೀತಿ ವಿಶೇಷ ಆಲೋಚನೆ ಬರುವುದು ಸಹಜ. ಆದರೆ ಅದನ್ನು ಕಾರ್ಯರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ. ಅದೇ ರೀತಿ ತಮಿಳುನಾಡಿನ ಮಧುರೈನ ಒಂದು ಜೋಡಿ ಈ ಉಪಾಯವನ್ನು ಕಾರ್ಯ ರೂಪಕ್ಕೆ ತಂದಿದೆ. ಮದುವೆಯ ಆಮಂತ್ರಣ ಪತ್ರದಲ್ಲಿಯೇ ನೀವು ಯಾವ ಖಾತೆಗೆ ಉಡುಗೊರೆ ಹಣವನ್ನು ಹಾಕಬಹುದು ಎನ್ನುವ ಮಾಹಿತಿ ನೀಡಲಾಗಿತ್ತು. ಫೋನ್ ಪೇ ಮತ್ತು ಗೂಗಲ್ ಪೇ ಎರಡರ ಕ್ಯೂ ಆರ್ ಕೋಡ್ನ್ನು ಮುದ್ರಿಸಲಾಗಿತ್ತು. ಇದರಿಂದಾಗಿ ಮದುವೆಗೆ ಬಾರದವರೂ ಉಡುಗೊರೆಯನ್ನು ಸುಲಭವಾಗಿ ಕೊಡಬಹುದಾಗಿತ್ತು. ಹಾಗೆಯೇ ಮದುವೆಗೆ ಬಂದು, ಉಡುಗೊರೆ ಕೊಡಲು ಕವರ್ ಇಲ್ಲ, ಹೆಸರು ಬರೆಯಲು ಪೆನ್ ಇಲ್ಲ ಎಂದು ಹುಡುಕಾಡುವ ಬದಲು, ಸುಲಭವಾಗಿ ಕ್ಯೂ ಆರ್ ಕೋಡ್ ಬಳಸಿ ಉಡುಗೊರೆ ನೀಡಲು ಅವಕಾಶ ಮಾಡಿಕೊಡಲಾಗಿತ್ತು.
ಅತ್ಯಂತ ಕಡಿಮೆ ಜನರ ಸಮ್ಮುಖದಲ್ಲಿ ನಡೆದ ಮದುವೆಯಲ್ಲಿ ಸುಮಾರು 30 ಜನರು ಈ ಕ್ಯೂ ಆರ್ ಕೋಡ್ ಮೂಲಕವೇ ಉಡುಗೊರೆ ನೀಡಿದ್ದಾರೆ ಎನ್ನುತ್ತಾರೆ ವಧುವಿನ ತಾಯಿ ಟಿ.ಜೆ.ಜಯಂತಿ. ಈ ರೀತಿ ಲಗ್ನ ಪತ್ರಿಕೆ ಮಾಡಿಸಿದ್ದು ಸುದ್ದಿಯಾದ ಮೇಲೆ ಅನೇಕರು ನಮಗೆ ಕರೆ ಮಾಡಿದ್ದಾರೆ. ಹೇಗೆ ಮಾಡಿದಿರಿ, ಏನು ಎಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಆಕೆ ತಿಳಿಸಿದ್ದಾರೆ.