ಮಲಪ್ಪುರಂ: ಮಲಪ್ಪುರಂನ ನಿರ್ಭಯಾ ಕೇಂದ್ರದಲ್ಲಿ ನಡೆದ ಆಪ್ತ ಸಮಾಲೋಚನೆ ವೇಳೆ 17 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯೊಬ್ಬರು ಬೆಚ್ಚಿಬೀಳುವ ಸಂಗತಿಯೊಂದನ್ನು ಬಹಿರಂಗಗೊಳಿಸಿದ್ದಾರೆ.
ಕಳೆದ ಕೆಲ ತಿಂಗಳಲ್ಲಿ ತಮ್ಮ ಮೇಲೆ 38 ಮಂದಿ ಪುರಷರು ಲೈಂಗಿಕ ಶೋಷಣೆ ನಡೆಸಿದ್ದಾಗಿಯೂ, ತಾನು ಎದುರಿಸಿದ ಸಂದರ್ಭಗಳನ್ನು ಆಕೆ ಹೇಳಿಕೊಂಡಿದ್ದಾರೆ.
ಅಪ್ರಾಪ್ತೆ ಮೇಲೆ 2016 ರಲ್ಲಿ, 13 ವರ್ಷವಾಗಿದ್ದಾಗ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ ನಡೆದಿದೆ. ನಂತರ, ಒಂದೇ ವರ್ಷದಲ್ಲಿ ಮತ್ತೊಮ್ಮೆ ಕೃತ್ಯ ಮರುಕಳಿಸಿದೆ. ಎರಡನೇ ಘಟನೆ ನಂತರ ಸಂತ್ರಸ್ತೆಯನ್ನು ಬಾಲಗೃಹಕ್ಕೆ ರವಾನಿಸಲಾಗಿತ್ತು. ನಂತರ, ಕಳೆದ ವರ್ಷ ತಾಯಿ ಮತ್ತು ಸಹೋದರನೊಂದಿಗೆ ಕಳುಹಿಸಿಕೊಡಲಾಗಿತ್ತು.
ಸಂತ್ರಸ್ತೆ ವರ್ಷದ ಹಿಂದೆ ಬಾಲಗೃಹದಿಂದ ಬಿಡಗಡೆಯಾದ ನಂತರ ಕೆಲಕಾಲ ಕಾಣೆಯಾಗಿದ್ದರು. ನಂತರ, ಡಿಸೆಂಬರ್‌ನಲ್ಲಿ ಪಾಲಕ್ಕಾಡ್‌ನಲ್ಲಿ ಪತ್ತೆಯಾಗಿದ್ದರು. ಅಲ್ಲಿಂದ ನಿರ್ಭಯ ಕೇಂದ್ರಕ್ಕೆ ತರಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಹನೀಫಾ ಹೇಳಿದ್ದಾರೆ.
ಕಾಣೆಯಾಗಿದ್ದಾಗ ತಾವು ಅನುಭವಿಸಿರುವ ಲೈಂಗಿಕ ಕಿರುಕುಳ, ಶೋಷಣೆಯ ಸರಣಿಯನ್ನು ನಿರ್ಭಯಾ ಕೇಂದ್ರದ ಅಧಿಕಾರಿಗಳ ಎದುರು ಸಂತ್ರಸ್ತೆ ವಿವರಿಸಿದ್ದಾರೆ.
ಬಹುತೇಕ ಎಲ್ಲ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಪ್ಪುರಂ ಮಕ್ಕಳ ಸಂರಕ್ಷಣಾ ಕೇಂದ್ರ(ಸಿಡಬ್ಲ್ಯೂಸಿ) ಅಧ್ಯಕ್ಷ ಶಜೇಶ್ ಭಾಸ್ಕರ್ ಮಾತನಾಡಿ, 'ಸಂತ್ರಸ್ತೆ ಒಂದು ವರ್ಷದ ಹಿಂದೆ ಬಿಡುಗಡೆಯಾದಾಗ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕಾನೂನು ಮತ್ತು ತಾರ್ಕಿಕ ಕ್ರಮಗಳನ್ನು ಅನುಸರಿಸಲಾಗಿತ್ತು,' ಎಂದು ಹೇಳಿದ್ದಾರೆ.
'ಐದು ಸದಸ್ಯರ ಸಮಿತಿಯು ಮಕ್ಕಳ ಸಂರಕ್ಷಣಾ ಅಧಿಕಾರಿಯೊಂದಿಗೆ ಸಮಾಲೋಚಿಸಿ ಬಿಡುಗಡೆ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದನ್ನು ಬಾಲಾಪರಾಧಿ ನ್ಯಾಯ ಕಾಯ್ದೆಗೆ ಅನುಗುಣವಾಗಿ ಮಾಡಲಾಗಿತ್ತು,' ಎಂದು ಅವರು ಹೇಳಿದ್ದಾರೆ.