ನವದೆಹಲಿ: ಮೂಲ ಕೊರೋನಾ ಸೋಂಕಿಗಿಂತ ಶೇಕಡ 70ರಷ್ಟು ವೇಗವಾಗಿ ಹರಡಬಲ್ಲ ಬ್ರಿಟನ್ ಮೂಲದ ಹೊಸ ರೂಪಾಂತರಿ ಸೋಂಕು ನಿವಾರಣೆಗೂ ಕೋವ್ಯಾಕ್ಸಿನ್ ಲಸಿಕೆ ರಾಮಬಾಣ ಮತ್ತು ಬಹಳ ಪರಿಣಾಮಕಾರಿ ಎಂದು ಲಸಿಕೆ ಉತ್ಪಾದನೆ ಕಂಪನಿ ಭಾರತ್ ಬಯೋಟೆಕ್ ಹೇಳಿಕೊಂಡಿದೆ.
ಹೊಸ ರೂಪಾಂತರಿ ಸೋಂಕಿನ ವಿರುದ್ಧವೂ ಲಸಿಕೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದು, ಇದು ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದೆ. ಸೋಂಕು ಇನ್ನಷ್ಟು ವೇಗವಾಗಿ ರೂಪಾಂತರ ಹೊಂದುವುದನ್ನು ಲಸಿಕೆಯಿಂದ ತಪ್ಪಿಸಬಹುದಾಗಿದೆ ಎಂದು ಭಾರತ್ ಬಯೋಟೆಕ್ ಇಂದು ಟ್ವೀಟ್ ಮಾಡಿದೆ. ಈ ಕುರಿತು ನಡೆಸಿರುವ ಸಂಶೋಧನೆಯ ತುಣುಕಿನ ಕೊಂಡಿಯನ್ನು ಅದರೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೂ ಭಾರತದಲ್ಲಿ 150 ಮಂದಿಯಲ್ಲಿ ಬ್ರಿಟನ್ ರೂಪಾಂತರಿ ಸೋಂಕು ಪತ್ತೆಯಾಗಿದೆ. ಸದ್ಯಕ್ಕೆ ಇರುವ ಲಸಿಕೆಗಳು ಈ ರೂಪಾಂತರ ಸೋಂಕಿನ ಮೇಲೆ ಪರಿಣಾಮಕಾರಿ ಹೌದೋ ಅಲ್ಲವೋ ಎಂಬ ಕುರಿತು ಚರ್ಚೆ ನಡೆದಿರುವ ಸಮಯದಲ್ಲೇ ಇದೀಗ ಭಾರತ್ ಬಯೋಟೆಕ್ ತಮ್ಮ ಲಸಿಕೆ ಇದಕ್ಕೂ ರಾಮಬಾಣ, ಪರಿಣಾಮಕಾರಿ ಎಂದೂ ಹೇಳಿಕೊಂಡಿದೆ.
ಕೋವ್ಯಾಕ್ಸಿನ್ ಲಸಿಕೆ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಮೂರನೇ ಹಂತದ ಪ್ರಯೋಗಕ್ಕೆ 25,800 ಸ್ವಯಂ ಸೇವಕರು ನೋಂದಣಿಯಾಗಿದ್ದಾರೆ ಎಂದು ಭಾರತ್ ಬಯೋಟೆಕ್ ಈ ಹಿಂದೆ ತಿಳಿಸಿತ್ತು. ಇದೀಗ ರೂಪಾಂತರಿ ಕೊರೋನಾ ನಿಗ್ರಹಕ್ಕೂ ತನ್ನ ಲಸಿಕೆ ರಾಮಬಾಣ ಎಂದು ಹೇಳಿಕೊಂಡಿದೆ.
ತುರ್ತು ಪರಿಸ್ಥಿತಿಯಲ್ಲಿ ಕೋವ್ಯಾಕ್ಸಿನ್ ಮಾರಾಟ ಮತ್ತು ವಿತರಣೆಗೆ ಅನುಮತಿ ನೀಡಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆ(ಎನ್‍ಐವಿ) ಸಹಯೋಗದಲ್ಲಿ ಸ್ವದೇಶಿಯಾಗಿ ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಲಾಗಿದೆ.