ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬ್ರೆಜಿಲ್ ಅಧ್ಯಕ್ಷ ಅಧ್ಯಕ್ಷ ಜೈರ್ ಎ ಬೋಲ್ಸನಾರೋ ಅವರು, ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷ್ಮಣನಿಗೆ ಜೀವದಾನ ನೀಡಿದ ಹನುಮಂತನಂತೆ ಕೊರೋನಾ ನಿರೋಧಕ ಲಸಿಕಗಳನ್ನು ಭಾರತದಿಂದ ಬ್ರೆಜಿಲ್'ಗೆ ಕಳುಹಿಸಿಕೊಂಡು ನಮ್ಮ ಪ್ರಜೆಗಳ ಜೀವ ಉಳಿಸಲಾಗಿದೆ ಎಂದ ಸಂದೇಶದಂತೆ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.
ಫೋಟೋದಲ್ಲಿ ಸಂಜೀವಿನ ಪರ್ವತ ಹೊತ್ತ ಹನುಮಂತ ಭಾರತದಿಂದ ಬ್ರೆಜಿಲ್'ಗೆ ಜಿಗಿಯುತ್ತಿರುವುದು ಕಂಡು ಬಂದಿದೆ. ವಿಶ್ವದ ಭೂಪಟ ಹಿನ್ನೆಲೆ ಫೋಟೋದಲ್ಲಿ ಕಂಡು ಬಂದಿದೆ. ಪರ್ವತ ಮೇಲೆ ಲಸಿಕೆಯನ್ನು ಹೋಲುವ ಸಿರಿಂಜ್ ಮತ್ತು ಔಷಧ ಬಾಟಲಿಯ ಸಣ್ಣ ಸಣ್ಣ ಚಿಹ್ನೆಗಳಿದ್ದು, ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ ಅವರೇ, ಜಂಟಿ ಸಹಯೋಗದ ಮೂಲಕ ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಭಾರತದಂತಹ ಸ್ನೇಹಿತ ನಮ್ಮೊಂದಿಗೆ ಇರುವುದು ಹೆಮ್ಮೆ ಮೂಡಿಸುತ್ತಿದೆ. ಲಸಿಕೆಗಳನ್ನು ರಫ್ತು ಮಾಡಿ ನೆರವಾಗಿದ್ದಕ್ಕೆ ಬ್ರೆಜಿಲ್ ಪರವಾಗಿ ಧನ್ಯವಾದ ಎಂದು ಬರೆದಿದ್ದಾರೆ.
ಧನ್ಯವಾದದಲ್ಲೂ ಭಾರತದ ಭಾಷೆಯನ್ನೇ ಬಳಕೆ ಮಾಡಿದ್ದಾರೆ. ಬ್ರೆಜಿಲ್ ಅಧ್ಯಕ್ಷರ ಈ ವಿಭಿನ್ನ ರೀತಿಯ ಧನ್ಯವಾದಗಳನ್ನು ನೋಡಿದ ನೆಟ್ಟಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬ್ರಿಜಿಲ್'ಗೆ ಕೊರೋನಾ ಲಸಿಕೆ ಕಳುಹಿಸಿರುವುದರ ಕುರಿತು ಪ್ರಧಾನಿ ಮೋದಿಯವರೂ ಕೂಡ ಟ್ವಿಟ್ ಮಾಡಿದ್ದು, ಆರೋಗ್ಯ ರಕ್ಷಣೆಯಲ್ಲಿ ಬ್ರೆಜಿಲ್ ಜೊತೆಗಿನ ಸಂಬಂಧ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ವಿವಿಧ ದೇಶಗಳಿಗೆ ಪ್ರಾಣ ರಕ್ಷಕ ಕೊರೊನಾ ಲಸಿಕೆ ಭಾರತ ರಫ್ತು ಮಾಡುತ್ತಿದ್ದು, ಇದೀಗ ಬ್ರೆಜಿಲ್ ಗೂ ಕೊವಿಶೀಲ್ಡ್ ವ್ಯಾಕ್ಸಿನ್ ಪೂರೈಕೆ ಮಾಡಿದೆ. ಈಗಾಗಲೇ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳಗೆ ಲಸಿಕೆ ಕಳುಹಿಸಿಕೊಡಲಾಗಿದೆ.