ಲಖನೌ: 'ಇನ್ನು ಮುಂದೆ ಅಂತರ್ ಜಾತಿ ವಿವಾಹದ ಪ್ರಕಟಣೆಯು ಕಡ್ಡಾಯವಲ್ಲ. ಅದು ಕೇವಲ ಐಚ್ಛಿಕ' ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
'ಇಂತಹ ಪ್ರಕಟಣೆಗಳು ದಂಪತಿಯ ಸ್ವಾತಂತ್ರ್ಯ ಮತ್ತು ಗೋಪ್ಯತೆಯ ಹಕ್ಕುಗಳನ್ನು ಕಸಿದುಕೊಳ್ಳಲಿವೆ. ತಮಗಿಷ್ಟದ ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯಕ್ಕೂ ತೊಡಕಾಗಿ ಪರಿಣಮಿಸಲಿವೆ' ಎಂದು ನ್ಯಾಯಾಧೀಶ ವಿವೇಕ್ ಚೌಧರಿ ಅಭಿಪ್ರಾಯಪಟ್ಟಿದೆ.
'ತಮ್ಮ ವಿವಾಹದ ಕುರಿತ ಪ್ರಕಟಣೆ ಹೊರಡಿಸಬೇಕೊ, ಬೇಡವೊ ಎಂಬುದರ ಬಗ್ಗೆ ದಂಪತಿಗಳು ವಿವಾಹ ನೋಂದಣಿ ಅಧಿಕಾರಿಗೆ ಲಿಖಿತ ಮನವಿ ಸಲ್ಲಿಸಬಹುದು' ಎಂದು 47 ಪುಟಗಳ ತೀರ್ಪಿನಲ್ಲಿ ಪೀಠ ತಿಳಿಸಿದೆ.