ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾವಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಗಣರಾಜ್ಯೋತ್ಸವ ದಿನದಂದು ತಾಳ್ಮೆಗೆಟ್ಟು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ.
ದೆಹಲಿಯಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ರೈತರು - ಪೊಲೀಸರು ನಡುವೆ ಘರ್ಷಣೆ ನಡೆದು ಪರಿಸ್ಥಿತಿ ನಿಯಂತ್ರಿಸಲು ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ.
ದೆಹಲಿಯ ಮುಕಾರ್ಬಾ ಚೌಕ್ ನಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ , ಜೊತೆಗೆ ಅಶ್ರುವಾಯು ಪ್ರಯೋಗಿಸಲಾಗಿದೆ. ಆದರೂ ಜಗ್ಗದ ರೈತರು ದೆಹಲಿಯ ಹೃದಯ ಭಾಗ ತಲುಪಿದ್ದು, ಕೆಂಪು ಕೋಟೆಗೆ ನುಗ್ಗಿ ರೈತ ಧ್ವಜ ಹಾರಿಸಿದ್ದಾರೆ.
ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಐಟಿಒ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ದೆಹಲಿಯ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಯಲ್ಲಿ ಇಂದು ಬೆಳಗ್ಗೆ ಹಿಂಸಾಚಾರ ಭುಗಿಲೆದ್ದಿದ್ದು, ಬ್ಯಾರಿಕೇಡ್ ಗಳನ್ನು ಮುರಿದು ಕಾಶ್ಮೀರಿ ದ್ವಾರವನ್ನು ತಲುಪಿದ ನೂರಾರು ರೈತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿ ಅಶ್ರುವಾಯು ಪ್ರಯೋಗಿಸಿದ್ದಾರೆ.
ದೆಹಲಿಯ ಮುಕರ್ಬಾ ಚೌಕ್‌ನಲ್ಲಿ ಘರ್ಷಣೆಗಳು ವರದಿಯಾಗಿದ್ದು, ಅಲ್ಲಿ ರೈತರು ಸಿಮೆಂಟೆಡ್ ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ. ನಂಗ್ಲಾಯ್‌ನಲ್ಲಿರುವ ಅಡೆತಡೆಗಳನ್ನು ಉಲ್ಲಂಘಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ರೈತರು ತಮ್ಮ ಟ್ರಾಕ್ಟರ್ ರ್ಯಾಲಿಯೊಂದಿಗೆ ನಜಫ್‌ಗಡದ ಕಡೆಗೆ ಮುಂದುವರಿಯಬೇಕಿತ್ತು,
ಆದಾಗ್ಯೂ, ಒಂದು ನಿರ್ದಿಷ್ಟ ಭಾಗದ ಪ್ರತಿಭಟನಾಕಾರರು ಮಧ್ಯ ದೆಹಲಿಯ ಕಡೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದರು. ಮೆರವಣಿಗೆಗಾಗಿ ಮಧ್ಯ ದೆಹಲಿಯ ಐತಿಹಾಸಿಕ ರಾಜ್‌ಪಾತ್‌ಗೆ ತಲುಪುವ ಪ್ರಯತ್ನದಲ್ಲಿ ನೂರಾರು ರೈತರು ಕಾಲ್ನಡಿಗೆಯಿಂದ ಮತ್ತು ಟ್ರಾಕ್ಟರುಗಳ ಮೂಲಕ ದೆಹಲಿ ಅಕ್ಷರ್ಧಮ್ ದೇವಸ್ಥಾನವನ್ನು ತಲುಪಿದ್ದಾರೆ. ಆದರೆ, ಅವರನ್ನು ಪೊಲೀಸರು ತಡೆದಿದ್ದಾರೆ.
ವರದಿಯ ಪ್ರಕಾರ, ದೇವಾಲಯದ ರಸ್ತೆಯಲ್ಲಿ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ.