ಕಾಸರಗೋಡು: ಕೋವಿಡ್ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ 'ಮನೋದರ್ಪಣಂ'ಎಂಬ ಕಾರ್ಯಕ್ರಮ ಪೆರಿಯದ ಕೇಂದ್ರೀಯ ವಿಶ್ವ ವಿದ್ಯಾಲಯ ಕ್ಯಾಂಪಸ್‍ನಲ್ಲಿ ಆರಂಭಗೊಂಡಿತು. ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಕಂಡುಕೊಳ್ಳುವುದು, ಓದಿನಲ್ಲಿ ಪ್ರೋತ್ಸಾಹ ನೀಡುವುದರ ಜತೆಗೆ ಕೌನ್ಸೆಲಿಂಗ್ ಸೇವೆಯನ್ನೂ ಖಚಿತಪಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಿಸುವ ಟೋಲ್‍ಫ್ರೀ ಹೆಲ್ಪ್‍ಲೈನ್ ನಂಬರ್(84484406320ಗೆ ಸಂಪರ್ಕಿಸಬಹುದು. ಅಧ್ಯಯನದಲ್ಲಿ ಗಮನಹರಿಸಲಾಗದಿರುವುದು ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು, ಕೋವಿಡ್ ಸಂಕಷ್ಟದಿಂದ ಒಂದು ವರ್ಷ ನಷ್ಟ ಉಂಟಾಗುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿ ಕರೆ ಲಭಿಸುತ್ತಿದೆ. ಪರೀಕ್ಷೆ, ಉದ್ಯೋಗದ ಬಗ್ಗೆಯೂ ಗೊಂದಲಗಳನ್ನು ಹೊತ್ತು ಕರೆಮಾಡುತ್ತಿದ್ದು, ಇವೆಲ್ಲದರ ಬಗ್ಗೆಯೂ ಅವರಿಗೆ ಮಾರ್ಗನಿರ್ದೇಶಗಳೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಕೊಡಲು ಸಾಧ್ಯವಿರುವುದಾಗಿ ಎಂದು ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಹಾಗೂ ಕೌನ್ಸೆಲರ್ ಡಾ. ಲಕ್ಷ್ಮೀ ತಿಳಿಸಿದ್ದಾರೆ.