ಕೊಚ್ಚಿ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನೇಮಂ ಕ್ಷೇತ್ರದ ಹಾಲಿ ಶಾಸಕ ಒ. ರಾಜಗೋಪಾಲ್ ಸ್ಪರ್ಧಿಸುತ್ತಿಲ್ಲ ಎಂದು ಬಿಜೆಪಿಯ ರಾಜ್ಯ ನಾಯಕತ್ವ ಹೇಳಿದೆ. ರಾಜ್ಯ ನಾಯಕತ್ವವು ರಾಜಗೋಪಾಲ್ ಅವರನ್ನು ಹೊರತುಪಡಿಸಿ ಮೊದಲ ಹಂತದ ಅಭ್ಯರ್ಥಿಗಳ ಆರಂಭಿಕ ಪಟ್ಟಿಯನ್ನು ಕೇಂದ್ರ ನಾಯಕತ್ವಕ್ಕೆ ಸಲ್ಲಿಸಿದೆ. 40 ಕ್ಷೇತ್ರಗಳ ಕಾರ್ಯಸಾಧ್ಯತಾ ಪಟ್ಟಿಯನ್ನು ಸಲ್ಲಿಸಲಾಗಿದೆ.
ಕ್ಷೇತ್ರಗಳನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ಪಟ್ಟಿ ಮಾಡಲಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್, ಕುಮ್ಮನಂ ರಾಜಶೇಖರನ್, ಎ.ಎನ್. ರಾಧಾಕೃಷ್ಣನ್, ಎಂ.ಟಿ.ರಮೇಶ್, ಸಿ ಕೃಷ್ಣಕುಮಾರ್ ಮತ್ತು ಸಂದೀಪ್ ವಾರಿಯರ್ ಅವರನ್ನು ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಿಂದ ಕಣಕ್ಕಿಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚಲನಚಿತ್ರ ತಾರೆಯರಾದ ಸುರೇಶ್ ಗೋಪಿ ಮತ್ತು ಕೃಷ್ಣಕುಮಾರ್ ಕೂಡ ಪ್ರಾಥಮಿಕ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಬಿಜೆಪಿ ಪೌರ ಸದಸ್ಯ ಜಾಕೋಬ್ ಥಾಮಸ್, ಟಿಪಿ ಸೆನ್ಕುಮಾರ್ ಮತ್ತು ಸಿ.ವಿ.ಅನಂದ ಬೋಸ್ ಕೂಡ ಇದ್ದಾರೆ. ನೇಮಂ ನಿಂದ ಕುಮ್ಮನಂ ರಾಜಶೇಖರನ್ ಮತ್ತು ಸುರೇಶ್ ಗೋಪಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಚಲನಚಿತ್ರ ಮತ್ತು ಧಾರಾವಾಹಿ ತಾರೆ ಕೃಷ್ಣಕುಮಾರ್ ಅಥವಾ ಎಸ್ ಸುರೇಶ್ ತಿರುವನಂತಪುರ ಸೆಂಟ್ರಲ್‍ನಲ್ಲಿ ಸ್ಪರ್ಧಿಸಲಿದ್ದಾರೆ. ವಿ.ವಿ.ರಾಜೇಶ್ ಅವರು ವತ್ತೂರ್ಕದಲ್ಲಿ ಸ್ಪರ್ಧಿಸುವರು. ಕೇಂದ್ರ ನಾಯಕತ್ವ ಒಪ್ಪಿಗೆ ಸೂಚಿಸಿದರೆ ಕೆ ಸುರೇಂದ್ರನ್ ಕಳಿಕೂತ್ತಂನಲ್ಲಿ ಸ್ಪರ್ಧಿಸಲಿದ್ದಾರೆ.
ಕಾಟಾಕಡದಲ್ಲಿ ಪಿ.ಕೆ.ಕೃಷ್ಣದಾಸ್, ಪಾರಶಾಲಾದಲ್ಲಿ ಕರಮಣ ಜಯನ್, ಅಟ್ಟಿಂಗಲ್‍ನಲ್ಲಿ ಬಿ.ಎಲ್.ಸುಧೀರ್, ಕುನ್ನತೂರಿನಲ್ಲಿ ರಾಜಿ ಪ್ರಸಾದ್, ಚತ್ತಣ್ಣೂರಿನಲ್ಲಿ ಬಿ.ಬಿ.ಗೋಪಕುಮಾರ್ ಮತ್ತು ಕರುನಾಗಪಳ್ಳಿಯಲ್ಲಿ ಡಾ. ಕೆ.ಎಸ್.ರಾಧಾಕೃಷ್ಣನ್, ಚೆಂಗನ್ನೂರಿನಲಲಿ ಎಂ.ಟಿ.ರಮೇಶ್ ಮತ್ತು ತ್ರಿಪುಣಿತ್ತುರದಲ್ಲಿ ಪಿ.ಆರ್.ಶಿವಶಂಕರ್ ಕೂಡ ಸ್ಪರ್ಧಿಸುವ ಸಾಧ್ಯತೆ ಇದೆ.
ಸಂದೀಪ್ ವಾರಿಯರ್ ಮತ್ತು ಬಿ ಗೋಪಾಲಕೃಷ್ಣನ್ ಅವರನ್ನು ತ್ರಿಶೂರ್‍ನಲ್ಲಿ ಪರಿಗಣಿಸಲಾಗುತ್ತಿದೆ. ಮನಲೂರಿನ ಎ.ಎನ್.ರಾಧಾಕೃಷ್ಣನ್, ಮಲಂಪುಳದಲ್ಲಿ ಸಿ ಕೃಷ್ಣಕುಮಾರ್ ಮತ್ತು ಮಂಜೇಶ್ವರದಲ್ಲಿ ಕೆ ಶ್ರೀಕಾಂತ್ ಸ್ಪರ್ಧಿಸುವ ಸಾಧ್ಯತೆ ಇದೆ.
ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಕುಟ್ಟಿ ಅವರು ಕಾಸರಗೋಡು ಅಥವಾ ಉದುಮ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. 40 ಕ್ಷೇತ್ರಗಳಲ್ಲಿ ಅಂತಿಮವಾಗಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಅಂತಿಮ ತೀರ್ಮಾನ ಈ ತಿಂಗಳ ಕೊನೆಯಲ್ಲಿ ಹೊರಬೀಳಲಿದೆ.