ನವದೆಹಲಿ: ರೂಪಾಂತರಿ ಕೊರೋನಾ ಭೀತಿಯ ನಡುವೆ ಯುನೈಟೆಡ್ ಕಿಂಗ್ ಡಮ್ ನಿಂದ ವಿಮಾನಗಳ ಸೇವೆ ಪುನರ್ ಆರಂಭವಾಗಿದ್ದು, ಇಂಗ್ಲೆಂಡ್ ನಲ್ಲಿ ವಿಮಾನ ಹತ್ತುವ ಮುನ್ನ ಮತ್ತು ಭಾರತಕ್ಕೆ ಬಂದ ನಂತರ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಬೇಕಾಗಿದೆ.
ಪ್ರಯಾಣಿಕರು ಇಂಗ್ಲೆಂಡ್ ನಲ್ಲಿ ವಿಮಾನ ಹತ್ತುವ ಮುನ್ನ ಏರ್ ಸುವಿಧಾ ಪೋರ್ಟಲ್ ನಲ್ಲಿ ಆರ್ ಟಿ- ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ವಿಮಾನ ನಿಲ್ದಾಣದ ಅಧಿಕೃತ ವೆಬ್ ಸೈಟ್ ನಲ್ಲಿ ಅಪಲೋಡ್ ಮಾಡಬೇಕಾಗುತ್ತದೆ ಎಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ ನೀಡಿರುವ ಪ್ರಯಾಣಿಕರ ಸಲಹಾ ಮಾರ್ಗಸೂಚಿಯ ಪಟ್ಟಿಯಲ್ಲಿ ತಿಳಿಸಲಾಗಿದೆ.
ಪ್ರಯಾಣ ಕೈಗೊಳ್ಳುವ 72 ಗಂಟೆಗಳೊಳಗೆ ಆರ್ ಟಿ- ಪಿಸಿಆರ್ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ 3400 ರೂ.ಗೆ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಫಲಿತಾಂಶ ಬರಲು 10 ಗಂಟೆ ಬೇಕಾಗಲಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ದೆಹಲಿಯಲ್ಲಿ ಆರ್ ಟಿ- ಪಿಸಿಆರ್ ಪರೀಕ್ಷೆಯಾದ ಬಳಿಕ ಎಲ್ಲಾ ಪ್ರಯಾಣಿಕರು ಏಳು ದಿನಗಳ ಸಾಂಸ್ಥಿಕ ಕ್ವಾರೈಂಟೈನ್ ನಲ್ಲಿ ಇರಬೇಕಾಗುತ್ತದೆ.
ಸೀಮಿತ ಸಾಮರ್ಥ್ಯ ದೊಂದಿಗೆ ಶುಕ್ರವಾರ ಯುನೈಟೆಡ್ ಕಿಂಗ್ ಡಮ್ ನಿಂದ ವಿಮಾನಗಳ ಸೇವೆ ಪುನರ್ ಆರಂಭವಾಯಿತು. ಪ್ರತಿವಾರ 30 ತಲಾ 15ರಂತೆ ಭಾರತ ಮತ್ತು ಯುಕೆಯಿಂದ ಮೂವತ್ತು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಜನವರಿ 23ರವರೆಗೂ ಈ ವೇಳಾಪಟ್ಟಿ ಮುಂದುವರೆಯಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಈ ಹಿಂದೆ ಮಾಹಿತಿ ನೀಡಿದ್ದರು.
ಯುಕೆಗೆ ವಿಮಾನಗಳ ನಿರ್ಬಂಧವನ್ನು ಜನವರಿ 6ರಿಂದ ತೆರವುಗೊಳಿಸಲಾಗಿದೆ. ಈವರೆಗೂ ಒಟ್ಟಾರೇ 82 ಜನರಲ್ಲಿ ರೂಪಾಂತರಿ ಕೊರೋನಾವೈರಸ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.