ಕುಂಬಳೆ: ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮುನ್ನಡೆಸುವ ಐಶ್ವರ್ಯ ಕೇರಳ ಯಾತ್ರೆಗೆ ಭಾನುವಾರ ಸಂಜೆ ನೂರಾರು ಸಂಖ್ಯೆಯ ನೇತಾರರು, ಕಾರ್ಯಕರ್ತರ ಸಮ್ಮುಖ ಅಧಿಕೃತ ಚಾಲನೆ ನೀಡಲಾಯಿತು. ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ಭ್ರಷ್ಟಾಚಾರ, ವಂಚನೆಗಳ ಬಗ್ಗೆ ಜನಜಾಗೃತಿ ಮೂಡಿಸಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಯುಡಿಎಫ್ ಬಹುಮತದಿಂದ ಆಯ್ಕೆಯಾಗಿ ಸಮೃದ್ದ ಉತ್ತಮ ಆಡಳಿತಕ್ಕೆ ಮುನ್ನುಡಿಯಾಗಿ ಯಾತ್ರೆಗೆ ಚಾಲನೆ ನೀಡಲಾಯಿತು.
ಮಾಜಿ ಮುಖ್ಯಮಂತ್ರಿ ಮತ್ತು ಚುನಾವಣಾ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಉಮ್ಮನ್ ಚಾಂಡಿ ಮೆರವಣಿಗೆಯನ್ನು ಉದ್ಘಾಟಿಸಿದರು. ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಮತ್ತು ಕರ್ನಾಟಕದ ಮಾಜಿ ಸಚಿವರಾದ ಯು.ಟಿ. ಖಾದರ್, ವಿನಾಯಕುಮಾರ್ ಸೊರಕೆ, ಬಿ.ರಮಾನಾಥ ರೈ, ಮುಸ್ಲಿಂ ಲೀಗ್ ಮುಖಂಡ ಪಿ.ಕೆ.ಕುಂಞಲಿಕುಟ್ಟಿ, ಪ್ರತಿಪಕ್ಷದ ಉಪನಾಯಕ ಡಾ. ಎಂ.ಕೆ.ಮುನೀರ್, ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್, ನಾಯಕರಾದ ಪಿ. ಜೆ ಜೋಸೆಫ್, ಎ.ಎ ಅಜೀಜ್, ಅನೂಪ್ ಜಾಕೋಬ್, ಸಿಪಿ ಜಾನ್, ಜಿ ದೇವರಾಜನ್, ಕೆ ಸುಧಾಕರನ್ ಮತ್ತು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಉಪಸ್ಥಿತರಿದ್ದರು.
ಶುದ್ಧ ಉತ್ತಮ ಆಡಳಿತ ಎಂಬುದು ಐಶ್ವರ್ಯ ಕೇರಳ ಯಾತ್ರೆಯ ಘೋಷಣೆಯಾಗಿದ್ದು ಕಳೆದ ಐದು ವರ್ಷಗಳ ಎಡಪಂಥೀಯ ನೇತೃತ್ವದ ಸರ್ಕಾರದ ದುಷ್ಕೃತ್ಯದಲ್ಲಿ ನಲುಗಿರುವ ಕೇರಳದ ಸಮೃದ್ಧಿಯನ್ನು ಮರಳಿ ಪಡೆಯಲು ಪ್ರಜಾಪ್ರಭುತ್ವ ಜಾತ್ಯತೀತ ಪ್ರಗತಿಪರ ಶಕ್ತಿಗಳನ್ನು ಒಂದುಗೂಡಿಸುವುದು ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಯುಡಿಎಫ್ ಪರ್ಯಾಯ ಅಭಿವೃದ್ಧಿ ಮತ್ತು ಮಾದರಿ ಆಡಳಿತವನ್ನು ಜನರಿಗೆ ಪ್ರಸ್ತುತಪಡಿಸುತ್ತದೆ ಎಂದು ಚಾಲನೆ ನೀಡಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.
ಈ ಯಾತ್ರೆ ಜನರ ಭಾಗವಹಿಸುವಿಕೆಯೊಂದಿಗೆ ಚುನಾವಣೆಗಳಿಗಾಗಿ ಯುಡಿಎಫ್ ನ ಪ್ರಣಾಳಿಕೆಯನ್ನು ಜನರಿಗೆ ತಿಳಿಸುವ ಗುರಿಯನ್ನು ಹೊಂದಿದೆ. ದೇಶ ಮತ್ತು ರಾಜ್ಯ ಎದುರಿಸುತ್ತಿರುವ ಪ್ರಸ್ತುತ ರಾಜಕೀಯ ವಿಷಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳು ಮತ್ತು ಭ್ರಷ್ಟಾಚಾರವನ್ನು ಬಹಿರಂಗಪಡಿಸಲಿದೆ ಎಂದು ರಮೇಶ್ ಚೆನ್ನಿತ್ತಲ ತಿಳಿಸಿದರು.
ಕೇರಳದಲ್ಲಿ ಐಶ್ವರ್ಯ ಕೇರಳ ಯಾತ್ರೆಯ ಮೂಲಕ ಎಲ್ ಡಿ ಎಫ್ ಮತ್ತು ಎನ್.ಡಿ.ಎ ಗಿಂತ ಮೊದಲೇ ಯುಡಿಎಫ್ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕಾಲಿರಿಸಿದ್ದು ಗಡಿನಾಡು ಕುಂಬಳೆ ಸಾಕ್ಷಿಯಾಯಿತು. ಕೇರಳದ ಎಲ್ಲಾ 14 ಜಿಲ್ಲೆಗಳ ಮೂಲಕ ಐಶ್ವರ್ಯ ಕೇರಳ ಯಾತ್ರೆ ಸಾಗಲಿದ್ದು, ಪ್ರತಿದಿನ ಯಾತ್ರೆ ತಂಡ ಆಗಮಿಸುವ ಜಿಲ್ಲೆಯ ಸಾಮಾಜಿಕ-ಸಾಂಸ್ಕೃತಿಕ ಮುಖಂಡರನ್ನು ಕಾಂಗ್ರೆಸ್ ಮುಖಂಡರು ಭೇಟಿಯಾಗಲಿದ್ದಾರೆ. ಇದರೊಂದಿಗೆ ಯುಡಿಎಫ್ ಘಟಕಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ಕೇರಳ ಯಾತ್ರೆಗೆ ಸಮಾನಾಂತರವಾಗಿ ನಡೆಯಲಿದೆ. ಈ ಬಾರಿ ಯುಡಿಎಫ್ ನ ಸ್ಥಾನ ಹಂಚಿಕೆ ಮಾತುಕತೆ ವಿವಾದ ಮತ್ತು ಮಾಧ್ಯಮ ಚರ್ಚೆಗಳಿಗೆ ಯಾವುದೇ ಅವಕಾಶವಿಲ್ಲದೆ ಪ್ರಾರಂಭವಾಯಿತು. ಫೆಬ್ರವರಿ 22 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ. ಮಹಾ ರ್ಯಾಲಿಯೊಂದಿಗೆ ಕೊನೆಗೊಳ್ಳುವ ಯಾತ್ರೆಯ ಮುಕ್ತಾಯದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ.
ಯಾತ್ರೆಯ ಪೂರ್ವಭಾವಿಯಾಗಿ ಶನಿವಾರ ರಮೇಶ್ ಚೆನ್ನಿತ್ತಲ ಅವರು ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಚೆನ್ನಿತ್ತಲ ಅವರು ಕೆ.ಎಸ್.ಯು, ಯೂತ್ ಕಾಂಗ್ರೆಸ್ ಮತ್ತು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿದ್ದಾಗ ಅವರ ನೇತೃತ್ವದ ಎಲ್ಲಾ ರಾಜಕೀಯ ಯಾತ್ರೆಗಳಿಗೂ ಮುನ್ನ ಕೊಲ್ಲೂರಿಗೆ ಭೇಟಿ ನೀಡಿ ಯಾತ್ರೆಗೆ ತೊಡಗಿಸಿಕೊಳ್ಳುತ್ತಿದ್ದರೆಂಬುದು ಉಲ್ಲೇಖಾರ್ಹ. ಐಶ್ವರ್ಯ ಕೇರಳ ಯಾತ್ರೆಗೆ ಸೌಪರ್ಣಿಕ ದಡದಲ್ಲಿರುವ ವಾಗ್ದೇವಿ ಮಂಟಪ ತಲುಪಿ ಐಶ್ವರ್ಯ ಕೇರಳಕ್ಕಾಗಿ ಪ್ರಾರ್ಥಿಸಿದರು.