ನವದೆಹಲಿ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ನುಸುಳಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಕೃಷಿ ಕಾನೂನುಗಳ ವಿರುದ್ಧ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠಕ್ಕೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಈ ಮಾಹಿತಿ ನೀಡಿದ್ದಾರೆ.
ಸರ್ಕಾರದ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೆಕೆ ವೇಣುಗೋಪಾಲ್ ಅವರಿಗೆ ಸೂಚಿಸಿತು. ಅಲ್ಲದೆ ನಿಷೇಧಿತ ಸಂಘಟನೆ ರೈತರ ಪ್ರತಿಭಟನೆಯಲ್ಲಿ ನುಸುಳಿದ್ದರೆ, ಇಲ್ಲಿ ದಾಖಲೆ ಸಮೇತ ಆರೋಪ ಮಾಡುತ್ತಿದ್ದರೆ ನೀವು ಅದನ್ನು ದೃಢಿಕರಿಸಬೇಕು ಮತ್ತು ನಾಳೆಯೊಳಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಹೇಳಿದರು.
ಇದಕ್ಕೆ ಉತ್ತರಿಸಿದ ಕೆಕೆ ವೇಣುಗೋಪಾಲ್ ಅವರು, ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ನುಸುಳಿರುವ ಬಗ್ಗೆ ಗುಪ್ತಚರ ಇಲಾಖೆಯ ಅಗತ್ಯ ಮಾಹಿತಿಯೊಂದಿಗೆ ನಾಳೆಯೊಳಗೆ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ.