ಲಖನೌ: ಮೃಗಾಲಯದಲ್ಲಿನ ಕೆಂಪು ಹುಂಜಗಳು (ಕಾಡು ಕೋಳಿಗಳು) ಹಾಗೂ ಇತರ ಎಲ್ಲಾ ಪ್ರಭೇದದ ಹಕ್ಕಿಗಳನ್ನು ಕೊಲ್ಲಲು ಕಾನ್ಪುರ ಮೃಗಾಲಯದ ಆಡಳಿತವು ಭಾನುವಾರ ಆದೇಶಿಸಿದೆ.
ಇತ್ತೀಚೆಗೆ ಮೃಗಾಲಯದ ಆವರಣದಲ್ಲಿ ಮೃತಪಟ್ಟಿದ್ದ ಹಕ್ಕಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನಲ್ಲಿರುವ 'ಪ್ರಾಣಿಗಳ ರೋಗಗಳ ಕುರಿತಾದ ರಾಷ್ಟ್ರೀಯ ಸಂಸ್ಥೆ'ಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಎರಡು ಹುಂಜಗಳಿಗೆ ಎಚ್-5 ಸೋಂಕು ತಗುಲಿರುವುದು ದೃಢಪಟ್ಟಿತ್ತು.
'ಮುಂಜಾಗ್ರತಾ ಕ್ರಮವಾಗಿ ಅನಿರ್ದಿಷ್ಟಾವಧಿವರೆಗೆ ಮೃಗಾಲಯಕ್ಕೆ ಬೀಗ ಹಾಕಲಾಗಿದ್ದು, ಮುಂದಿನ ಆದೇಶದವರೆಗೂ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಮೃಗಾಲಯದ ಸುತ್ತಲಿನ 1 ಕಿ.ಮೀ. ಪ್ರದೇಶವನ್ನು ಸೋಂಕಿತ ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಹಕ್ಕಿಗಳ ಕೊಲ್ಲುವಿಕೆ ಕಾರ್ಯ ಆರಂಭಿಸಲಾಗಿದೆ' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ (ನಗರ) ಅತುಲ್ ಕುಮಾರ್ ಭಾನುವಾರ ತಿಳಿಸಿದ್ದಾರೆ.
'ಮೃಗಾಲಯದಲ್ಲಿ ಹಿಂದಿನ ಐದು ದಿನಗಳಲ್ಲಿ ನಾಲ್ಕು ಹುಂಜಗಳು ಹಾಗೂ ಎರಡು ಗಿಳಿಗಳು ಸತ್ತಿವೆ. ಈ ಪೈಕಿ ಎರಡು ಹುಂಜಗಳಿಗೆ ಹಕ್ಕಿ ಜ್ವರ ಇರುವುದು ಖಾತರಿಯಾಗಿದೆ' ಎಂದು ಅವರು ಹೇಳಿದ್ದಾರೆ.
'ಮೃಗಾಲಯದ ಸುತ್ತಮುತ್ತಲಿನ ಕೋಳಿ ಫಾರಂಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೋಳಿ ಹಾಗೂ ಕುರಿ ಮಾಂಸ ಮಾರಾಟ ಮಾಡುವವರ ಮೇಲೆ ನಿಗಾ ಇಡುವ ಸಲುವಾಗಿ ವಿಶೇಷ ತಂಡಗಳನ್ನೂ ರಚಿಸಲಾಗಿದೆ. ಸತ್ತ ಪಕ್ಷಿಗಳ ವಿಲೇವಾರಿಗೆ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗಿದೆ' ಎಂದೂ ಅವರು ವಿವರಿಸಿದ್ದಾರೆ.
ಕಂಟೈನ್‌ಮೆಂಟ್ ವಲಯ ಘೋಷಣೆ: ಜಿಲ್ಲಾಧಿಕಾರಿ
'ಮೃಗಾಲಯದ ಸುತ್ತಲಿನ 10 ಕಿ.ಮೀ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದೆ. ಈ ಭಾಗದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟ ಮಾಡದಂತೆ ಎಲ್ಲಾ ವ್ಯಾಪಾರಿಗಳಿಗೂ ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಕೋಳಿ ಉತ್ಪನ್ನಗಳ ಸಾಗಾಣೆಯ ಮೇಲೆ ನಿರ್ಬಂಧ ಹೇರಲಾಗಿದೆ. ಕಾನ್ಪುರ ಮೃಗಾಲಯದ ಆಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಇಲಾಖೆಯ ವೈದ್ಯರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆಕ್ಷನ್ 144 ಕೂಡ ಜಾರಿಗೊಳಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಅತುಲ್ ತಿವಾರಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಬಾರಾಬಂಕಿ, ಅಯೋಧ್ಯ, ಸೋನೆಭದ್ರ ಮತ್ತು ಝಾನ್ಸಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಕಾಗೆಗಳು ಸತ್ತಿದ್ದು ವರದಿಯಾಗಿತ್ತು.
'ಹಕ್ಕಿ ಜ್ವರ ವ್ಯಾಪಿಸದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ರ‍್ಯಾಪಿಡ್ ರೆಸ್ಪಾನ್ಸ್ ತಂಡಗಳನ್ನು ರಚಿಸಲಾಗಿದೆ' ಎಂದು ಪಶು ವೈದ್ಯಕೀಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
13 ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ದೃಢ
ಭೋಪಾಲ್: 'ಮಧ್ಯಪ್ರದೇಶದ 13 ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ದೃಢಪಟ್ಟಿವೆ. ಕಳೆದ ತಿಂಗಳು ಮೊದಲ ಪ್ರಕರಣ ಪತ್ತೆಯಾಗಿತ್ತು. ಅಲ್ಲಿಂದ ಈವರೆಗೂ ರಾಜ್ಯದ 27 ಜಿಲ್ಲೆಗಳಲ್ಲಿ 1,100 ಕಾಗೆಗಳು ಹಾಗೂ ಇತರ ಪಕ್ಷಿಗಳು ಸತ್ತಿವೆ' ಎಂದು ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.
'ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪಕ್ಷಿಗಳ ಕೊಲ್ಲುವಿಕೆ ಕಾರ್ಯವನ್ನು ಆರಂಭಿಸಿದ್ದು, ಫಾರಂ ಕೋಳಿಗಳನ್ನೂ ಸುಡಲಾಗುತ್ತಿದೆ. ಅಗರ್ ಮಾಲ್ವಾ ಜಿಲ್ಲೆಯಲ್ಲಿ ಕೋಳಿ ಮಾರುಕಟ್ಟೆಯನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಲಾಗಿದೆ' ಎಂದೂ ತಿಳಿಸಿದ್ದಾರೆ.