ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಪೀಡಿತ ಜನಸಾಮಾನ್ಯರಿಗೆ ಪರಿಹಾರವನ್ನು ನೀಡುವುದರ ಜೊತೆಗೆ ಆರೋಗ್ಯ, ಮೂಲಸೌಕರ್ಯ ಮತ್ತು ರಕ್ಷಣೆಗೆ ಹೆಚ್ಚಿನ ಖರ್ಚು ಮಾಡುವ ಮೂಲಕ ಆರ್ಥಿಕ ಚೇತರಿಕೆಗೆ ಹೆಚ್ಚಿನ ಗಮನ ಹರಿಸುವ ಭರವಸೆಯೊಂದಿಗೆ ಕೇಂದ್ರ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಬಜೆಟ್ ಮಂಡಿಸಲಿದ್ದಾರೆ.
ಕೋವಿಡ್-19 ಬಿಕ್ಕಟ್ಟಿನಿಂದ ಭಾರತ ಹೊರಹೊಮ್ಮುತ್ತಿದ್ದಂತೆ, ಮಧ್ಯಂತರವೂ ಸೇರಿದಂತೆ ಮೋದಿ ಸರ್ಕಾರದ ಒಂಬತ್ತನೇ ಬಜೆಟ್ ಇದಾಗಿದ್ದು, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚು ವೆಚ್ಚ, ಅಭಿವೃದ್ಧಿ ಯೋಜನೆಗಳಿಗೆ ಉದಾರವಾಗಿ ಅನುದಾನ, ಸರಾಸರಿ ತೆರಿಗೆ ಪಾವತಿದಾರರ ಕೈಯಲ್ಲಿ ಹೆಚ್ಚಿನ ಹಣ ಇಡುವಂತೆ ಮಾಡುವ, ವಿದೇಶಿ ಹೂಡಿಕೆ ಆಕರ್ಷಿಸುವ ಸುಲಭ ನಿಯಮಗಳತ್ತ ಗಮನ ಹರಿಸುವ ಸಾಧ್ಯತೆಯಿದೆ.
2019ರಲ್ಲಿ ಮೊದಲ ಬಾರಿಗೆ ಬಜೆಟ್ ದಾಖಲೆಗಳಿಗಾಗಿ ಸೂಟ್ ಕೇಸ್ ಬದಲಿಗೆ ಕೆಂಪುಬಟ್ಟೆಯನ್ನು ಬಳಸಿದ ಸೀತಾರಾಮನ್, ಈ ಬಾರಿ ಕಾಗದ ರಹಿತ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ.ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶದ ಆರ್ಥಿಕತೆಯನ್ನು ಮತ್ತೆ ತನ್ನ ಹಾದಿಗೆ ತರಲು ಈ ಬಜೆಟ್ ಮಾರ್ಗಸೂಚಿಯಾಗಲಿದೆ.