ವಿಯೆಟ್ನಾಂ: ಜಗತ್ತಿನ ಮೂರನೇ ಅತಿದೊಡ್ಡ ಅಕ್ಕಿ ರಫ್ತುದಾರ ವಿಯೆಟ್ನಾಂ ದೇಶವು ಇದೇ ಮೊದಲ ಬಾರಿಗೆ ತನ್ನ ಪ್ರತಿಸ್ಪರ್ಧಿ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಂಡಿದೆ. ದಶಕಗಳ ನಂತರ ಮೊದಲ ಬಾರಿಗೆ ಸ್ಥಳೀಯ ಬೆಲೆಗಳು 9 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಏರಿದ ನಂತರ ಸೀಮಿತ ದೇಶೀಯ ಸರಬರಾಜು ಮಧ್ಯೆ ಭಾರತದಿಂದ ಅಕ್ಕಿಯನ್ನು ಆಮದುಕೊಳ್ಳಲಾಗಿದೆ.
ವಿಯೆಟ್ನಾಂ ಒಂದೇ ಅಲ್ಲದೆ ಈ ಹಿಂದೆ ಚೀನಾ ಕೂಡ ದಶಗಳಲ್ಲಿ ಮೊದಲ ಬಾರಿಗೆ ಭಾರತದಿಂದ ಅಕ್ಕಿಯನ್ನು ಖರೀದಿಸಿತ್ತು. ಇದಕ್ಕೆ ಕಾರಣ ಏಷ್ಯಾದ ಹಲವು ದೇಶಗಳಲ್ಲಿ ಅಕ್ಕಿಯ ಕೊರತೆ ಕಾಣಿಸಿದೆ. ಪರಿಣಾಮ ವಿಯೆಟ್ನಾಂ ಮತ್ತು ಥಾಯ್ಲಾಂಡ್‌ನಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿದ್ದ ಇತರ ದೇಶಗಳು ಈಗ ಅನಿವಾರ್ಯವಾಗಿ ಭಾರತದತ್ತ ಚಿತ್ತ ನೆಟ್ಟಿವೆ.
ಭಾರತವು ಧಾನ್ಯಗಳ ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದರೂ, ಹಲವು ದೇಶಗಳು ಗುಣಮಟ್ಟದ ನೆಪವೊಡ್ಡಿ ಅಕ್ಕಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರಲಿಲ್ಲ. ಈಗ ಈ ದೇಶಗಳೆಲ್ಲ ಭಾರತವನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾಗಿದೆ.
ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಟನ್‌ಗೆ 310 ಡಾಲರ್‌ನಂತೆ 70,000 ಟನ್ ಅಕ್ಕಿಯನ್ನು ರಫ್ತು ಮಾಡುವಂತೆ, ಭಾರತದ ರಫ್ತುದಾರರಿಗೆ ವಿಯೆಟ್ನಾಂ ಆರ್ಡರ್ ಕೊಟ್ಟಿದೆ. "ಮೊದಲ ಬಾರಿಗೆ ನಾವು ವಿಯೆಟ್ನಾಂಗೆ ಅಕ್ಕಿ ರಫ್ತು ಮಾಡುತ್ತಿದ್ದೇವೆ," ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ.ವಿ. ಕೃಷ್ಣ ರಾವ್ ಹೇಳಿದ್ದಾರೆ.
''ಭಾರತದ ಬೆಲೆಗಳು ತುಂಬಾ ಆಕರ್ಷಣೆಯನ್ನು ಹೊಂದಿವೆ. ಬೆಲೆಯ ನಡುವಿನ ಬಹುದೊಡ್ಡ ವ್ಯತ್ಯಾಸಗಳು ರಫ್ತು ಮಾಡಲು ಪ್ರೋತ್ಸಾಹಿಸಿವೆ'' ಎಂದು ಬಿ.ವಿ. ಕೃಷ್ಣ ರಾವ್ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಚೀನಾ ಮೂರು ದಶಕಗಳಲ್ಲೇ ಮೊದಲ ಬಾರಿಗೆ ಭಾರತದಿಂದ ಅಕ್ಕಿ ಆಮದು ಮಾಡಿಕೊಂಡಿತ್ತು. ಇದೀಗ ಅಕ್ಕಿ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ದೇಶವೇ ನಮ್ಮಿಂದ ಅಕ್ಕಿ ತರಿಸಿಕೊಳ್ಳುತ್ತಿದೆ.