ಬದಿಯಡ್ಕ: ಪರಸ್ಪರ ಅಭಿವ್ಯಕ್ತಿಗೆ ಮಾಧ್ಯಮವಾದ ಭಾಷೆಗಳೊಳಗೆ ಮೇಲು-ಕೀಳಿನ ಭಾವಗಳಿರಬಾರದು. ಭಾಷೆಗಳು ಯಾವುದೇ ಇರಲಿ ಅವುಗಳೊಳಗೆ ಪರಸ್ಪರ ಸಾಮರಸ್ಯ ಮುಖ್ಯವಾದುದು. ಪ್ರತಿಯೊಂದು ಭಾಷೆಯ ಬೆಳವಣಿಗೆ ಅದರೊಳಗಿನ ಅಂತಃಸತ್ವವನ್ನು ಬೆಳಕಿಗೆ ತರುವುದರೊಂದಿಗೆ ಆಂತರಂಗಿಕವಾಗಿ ಬೆಸುಗೆಯನ್ನು ಗಟ್ಟಿಗೊಳಿಸಲು ಕಾರಣವಾಗುತ್ತದೆ ಎಂದು ಧಾರ್ಮಿಕ, ಸಾಮಾಜಿಕ ಮುಂದಾಳು, ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ಟ್ರಸ್ಟ್ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಅವರು ತಿಳಿಸಿದರು.
ಪೆರ್ಲದ ಸಾಹಿತ್ತಿಕ, ಸಾಂಸ್ಕøತಿಕ ಸಂಘಟನೆಯಾದ ಸವಿಹೃದಯದ ಕವಿಮಿತ್ರರು ವೇದಿಕೆ ನೇತೃತ್ವದಲ್ಲಿ ಹನುಮಗಿರಿಯ ವೈದೇಹಿ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸವಿ ಹೃದಯದ ಸಾಹಿತ್ಯ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ವೈವಿಧ್ಯತೆಗೆ ಹೆಸರಾದ ಗಡಿನಾಡು ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರ ಸಮಗ್ರ ಬೆಳವಣಿಗೆಗಳಿಗೆ ಪೂರಕವಾಗಿ ಸಾಹಿತ್ಯ-ಸಾಂಸ್ಕøತಿಕ ಕ್ಷೇತ್ರ ಕೊಡುಗೆಗಳನ್ನು ನೀಡುತ್ತಿರಬೇಕು. ಯುವ ತಲೆಮಾರಿಗೆ ಮಣ್ಣಿನ ಸತ್ವವವನ್ನು ಪರಿಚಯಿಸುವ ಇಂತಹ ಕಾರ್ಯಚಟುವಟಿಕೆ ಒಗ್ಗಟ್ಟಿನಿಂದ ಮೂಡಿಬರುತ್ತಿರಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನಾದ್ಯಂತ ಯುವ ಸಾಹಿತಿಗಳಿಗೆ ಮಾರ್ಗದರ್ಶಿಯಾಗಿ ಕವಿಮಿತ್ರರು ವೇದಿಕೆ ವಿವಿಧ ಕಾರ್ಯಕ್ರಮಗಳ ಮೂಲಕ ಸದ್ದು ಮಾಡುತ್ತಿರುವುದು ಸ್ತುತ್ಯರ್ಹವಾದುದು. ಗ್ರಾಮೀಣ ಪ್ರದೇಶಗಳ ಯುವ ಪ್ರತಿಭೆಗಳನ್ನು ಪರಿಚಯಿಸಿ ಮುನ್ನೆಲೆಗೆ ತರುತ್ತಿರುವಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ಖ್ಯಾತ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಸಾಹಿತ್ತಿಕ, ಸಾಂಸ್ಕøತಿಕ ವಾತಾವರಣದ ಮರು ನಿರ್ಮಾಣಕ್ಕೆ ನಿರಂತರ ಕಾರ್ಯಕ್ರಮಗಳು ಅನಿವಾರ್ಯ. ಯುವ ಜನಾಂಗವನ್ನು ಸತ್ಪಥದ ನೆಲೆಯಲ್ಲಿ ಮುನ್ನಡೆಸಲು ಕಾವ್ಯ-ಕಲೆಗಳಿಗೆ ಸಾಧ್ಯವಿದೆ ಎಂದರು.
ಈ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲ ಭಟ್ ಚುಕ್ಕಿನಡ್ಕ ಅವರು ಬರದಿರುವ ಶ್ರೀಕೃಷ್ಣ ಚರಿತಾಮೃತ ನೂತನ ಕೃತಿಯ ಲೋಕಾರ್ಪಣೆಯನ್ನು ನನ್ಯ ಅಚ್ಚುತ ಮೂಡಿತ್ತಾಯ ಅವರು ನಿರ್ವಹಿಸಿದರು. ಈ ಸಂದರ್ಭ ಮಾತನಾಡಿದ ಕೃತಿಕತೃ ಗೋಪಾಲ ಭಟ್ ಮಾತನಾಡಿ, ನಂಬಿಕೆ-ಪರಂಪರೆಗಳನ್ನು ಯುವ ತಲೆಮಾರಿಗೆ ಹಸ್ತಾಂತರಿಸುವಲ್ಲಿ ವರ್ತಮಾನದ ನಡೆಗಳಂತಹ ಕಾರ್ಯಚಟುವಟಿಕೆಗಳು ಅಗತ್ಯ. ಈ ನಿಟ್ಟಿನಲ್ಲಿ ಸರಳ ಭಾಷಾಶೈಲಿಯೊಂದಿಗೆ ರಚಿರುವ ನೂತನ ಕೃತಿಗೆ ಎಲ್ಲರ ಬೆಂಬಲ ಅಗತ್ಯ ಎಂದರು.
ಸಮಾರಂಭದಲ್ಲಿ ಖ್ಯಾತ ವ್ಯೆಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅವರು ರಚಿಸಿರುವ ಕಾರ್ಟೂನ್ ಗಳ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು. ಪೆರ್ಲ ಜಗನ್ನಾಥ ಶೆಟ್ಟಿ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಉಪಸ್ಥಿತರಿದ್ದರು. ವೇದಿಕೆಯ ಸಂಯೋಜಕ ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆನಂದ ರೈ ಅಡ್ಕಸ್ಥಳ ವಂದಿಸಿದರು. ಬಳಿಕ ಮಧುರಕಾನನ ಗಣಪತಿ ಭಟ್ ಅವರು ಸಂಪಾದಿಸಿರುವ ಸವಿ ಜಜೇನು ಕವನ ಸಂಕಲನದ ವಿಮರ್ಶೆ ನಡೆಯಿತು. ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಸಾನು ಉಬರಡ್ಕ ವಿಮರ್ಶೆ ನಡೆಸಿದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ ಅಶ್ವಿನಿ ಕೋಡಿಬೈಲು ಅಧ್ಯಕ್ಷತೆ ವಹಿಸಿದ್ದರು. ಅಶೋಕ ಎನದ್.ಕಡೇಶಿವಾಲಯ ಚಾಲನೆ ನೀಡಿದರು.