ಕೊಚ್ಚಿ: ಹೊಸ ಕೋವಿಡ್ ಪ್ರಕರಣಗಳ ಪರಿಸ್ಥಿತಿ ಅಬಾಧಿತವಾಗಿ ಮುಂದುವರಿದಂತೆ, ಕೊಚ್ಚಿ ನಗರ ವ್ಯಾಪ್ತಿಯಲ್ಲಿರುವ ಚಿತ್ರಮಂದಿರಗಳ ಮುಂದೆ ಗುಂಪುಗೂಡುವುದನ್ನು ಪೋಲೀಸರು ನಿಷೇಧಿಸಿದ್ದಾರೆ.
ಕೋವಿಡ್ ಹರಡುವುದನ್ನು ತಡೆಯುವ ಹೊಸ ನಿರ್ಧಾರ ಇದೆಂದು ನಗರ ಪೋಲೀಸ್ ಆಯುಕ್ತ ಸಿ.ಎಚ್.ನಾಗರಾಜು ಹೇಳಿರುವರು. ನಿರ್ದೇಶನವನ್ನು ಧಿಕ್ಕರಿಸಿ ಹೆಚ್ಚಿನ ಸಂಖ್ಯೆಯ ಜನರು ಟಿಕೆಟ್ ಕೌಂಟರ್ ಮುಂದೆ ಜಮಾಯಿಸಿದರೆ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಚಿತ್ರಮಂದಿರಗಳ ಮುಂದೆ ಹೆಚ್ಚಿನ ಜನಸಂದಣಿಯಲ್ಲಿ ಯುವಕರು ಕಂಡುಬರುತ್ತಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮನೆಯಲ್ಲಿರುವ ವೃದ್ಧರ ಪ್ರಾಣಕ್ಕೆ ಅಪಾಯವಿದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು ಎಂದು ನಾಗರಾಜು ಹೇಳಿದರು.
ಕೋವಿಡ್ ರಕ್ಷಣೆಯ ಭಾಗವಾಗಿ ಮುಚ್ಚಲ್ಪಟ್ಟಿದ್ದ ಕೇರಳದ ಚಿತ್ರಮಂದಿರಗಳನ್ನು ಬುಧವಾರ ಮತ್ತೆ ತೆರೆಯಲಾಗಿತ್ತು. ವಿಜಯ್ ಅಭಿನಯದ ಚಲನಚಿತ್ರ "ಮಾಸ್ಟರ್" ಪ್ರದರ್ಶನಕ್ಕಿಡಲಾಗಿದೆ. ಕೋವಿಡ್ ಮಾರ್ಗಸೂಚಿಗಳು ಮತ್ತು ಮಾನದಂಡಗಳ ಪ್ರಕಾರ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತವೆಯಾದರೂ, ಚಿತ್ರಮಂದಿರಗಳ ಮುಂದೆ ಯುವಕರ ದೊಡ್ಡ ಗುಂಪು ಇರುವುದು ತೊಡಕಾಗುವ ಸಾಧ್ಯತೆಯನ್ನು ಎತ್ತಿಹಿಡಿದಿದೆ.