ಕಾಸರಗೋಡು: ಆದೂರು ಪೆÇಲೀಸ್ ಠಾಣಾ ವ್ಯಾಪ್ತಿಯ ಕಾನತ್ತೂರು ತೆಕ್ಕೇಕರದಲ್ಲಿ ಪತಿ ತನ್ನ ಹೆಂಡತಿಯನ್ನು ಗುಂಡಿಕ್ಕಿ ಕೊಂದ ಘಟನೆಗೆ ಪತಿಯ ಸಂಶಯ ರೋಗವೇ ಕಾರಣವೆಂದು ತಿಳಿದುಬಂದಿದೆ. ಕಾನತ್ತೂರು ದಕ್ಷಿಣದ ವಿಜಯನ್ (40), ಪತ್ನಿ ಬೇಬಿ (35) ಯನ್ನು ಶನಿವಾರ ಮಧ್ಯಾಹ್ನ ಮನೆಯಲ್ಲಿ ಗುಂಡಿಕ್ಕಿ ಕೊಂದು ಬಳಿಕ ತಾನು ನೇಣಿಗೆ ಶರಣಾದ ಘಟನೆ ನಡೆದಿತ್ತು.
ತನ್ನ ಪತ್ನಿ ಬೇಬಿಗೆ ಜೆಸಿಬಿ ಚಾಲಕನೊಂದಿಗೆ ರಹಸ್ಯ ಸಂಬಂಧವಿದೆ ಮತ್ತು ಇಬ್ಬರು ನಿಯಮಿತವಾಗಿ ಪೋನ್ ಮುಖಾಂತರ ಸಂಪರ್ಕದಲ್ಲಿದ್ದಾರೆ ಎಂದು ಸಂಶಯಗೊಂಡು ಆಗಾಗ ಜಗಳಗಳಾಗುತ್ತಿತ್ತು. ಈ ಬಗ್ಗೆ ಶನಿವಾರವೂ ವಾಗ್ಯುಯ್ದ ನಡೆದು ಪತ್ನಿಗೆ ಗುಂಡು ಹಾರಿಸುವುದರೊಂದಿಗೆ ಪರ್ಯವಸಾನಗೊಂಡಿತು. ಈ ವೇಳೆ ವಿಜಯನ್ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದೆ. ಗಂಡ ಸಂಶಯರೋಗದಿಂದ ಕುಡಿದು ಬಂದು ನಿತ್ಯ ಥಳಿಸುತ್ತಿರುವುದಾಗಿ ವಿಜಯನ್ ನ ಪತ್ನಿ ಬೇಬಿ ಶುಕ್ರವಾರವಷ್ಟೇ ಬೆಳಿಗ್ಗೆ ಆದೂರು ಪೋಲೀಸರಿಗೆ ದೂರು ನೀಡಿದ್ದಳೆಂದು ತಿಳಿದುಬಂದಿದೆ.
ನಕಲಿ ಬಂದೂಕು ತಯಾರಿಕೆಯ ಬಗ್ಗೆ ತನಿಖೆ:
ಶುಕ್ರವಾರ ಪತ್ನಿ ಪೋಲೀಸರಿಗೆ ನೀಡಿದ ದೂರಿನಿಂದ ಮತ್ತಷ್ಟು ಕುಪಿತನಾಗಿದ್ದ. ಶನಿವಾರ ಬೆಳಿಗ್ಗೆ ಮನೆಯ ಹೊರ ತೆರಳಿದ್ದ ವಿಜಯನ್ ಕುಡಿದು ಮತ್ತನಾಗಿ ಮಧ್ಯಾಹ್ನ ಮನೆಗಾಗಮಿಸಿ ವಾಗ್ವಾದ ಆರಂಭಿಸಿದ. ಏತನ್ಮಧ್ಯೆ, ವಿಜಯನ್ ಬೇಬಿಯನ್ನು ಒಂದೇ ಬ್ಯಾರೆಲ್ ನಕಲಿ ಬಂದೂಕಿನಿಂದ ಕಿವಿಗೆ ಹೊಡೆದನು. ಅವರ ಐದು ವರ್ಷದ ಮಗ ಇದಕ್ಕೆ ಸಾಕ್ಷಿಯಾಗಿದ್ದ. ಗಾಬರಿಗೊಂಡ ಪುತ್ರ ಅಭಿಲಾಶ್ ಪಕ್ಕದ ಮನೆಗೆ ಹೋಗಿ ತಿಳಿಸಿದ್ದನು.
ನೆರೆಹೊರೆಯವರು ಬರುವ ಹೊತ್ತಿಗೆ ವಿಜಯನ್ ಮನೆಯಿಂದ ಹೊರಟು ಹೋಗಿದ್ದನು. ನಂತರ ಸ್ಥಳೀಯರು ನಡೆಸಿದ ಶೋಧದ ವೇಳೆ ದೂರದ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದನು. ಈ ಹಿಂದೆ ವಿಜಯನ್, ಅವರ ಪತ್ನಿ ಮತ್ತು ಪುತ್ರ ಕುಂಡಂಗುಳಿಯಲ್ಲಿರುವ ಬೇಬಿಯ ತವರು ಮನೆಯಲ್ಲಿ ತಂಗಿದ್ದರು. ಇತ್ತೀಚೆಗೆಯಷ್ಟೆ ಕಾನತ್ತೂರಿಗೆ ಬಂದು ನೆಲಸಿದ್ದರು.
ವಿಜಯನ್ ಕೂಲಿ ಕಾರ್ಮಿಕನಾಗಿದ್ದು, ತೆಂಗಿನಕಾಯಿ ಸುಲಿಯುವ ಕೆಲಸ ಮಾಡುತ್ತಿದ್ದ. ದಿನಕ್ಕೆ 1500 ರೂ. ಸಂಪಾದಿಸುತ್ತಿದ್ದ ವಿಜಯನ್ ಉತ್ತಮ ಜೀವನವನ್ನು ನಡೆಸುತ್ತಿರುವಾಗ ನಕಲಿ ಮದ್ಯದ ಚಟಕ್ಕೆ ಬಿದ್ದನು. ಇದರೊಂದಿಗೆ ಪತ್ನಿಯ ಬಗ್ಗೆ ಅನುಮಾನದ ರೋಗ ಆರಂಭವಾಯಿತೆಂದು ಸಂಬಂಧಿಕರು ತಿಳಿಸಿದ್ದಾರೆ.
ವಿಜಯನ್‍ಗೆ ನಕಲಿ ಗನ್ ಎಲ್ಲಿ ಸಿಕ್ಕಿತೆಂಬ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಅನೇಕ ಜನರು ಪ್ರಾಣಿಗಳನ್ನು ಓಡಿಸಲು ನಕಲಿ ಬಂದೂಕುಗಳನ್ನು ಬಳಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಕೆಲವು ಸ್ಥಳಗಳಲ್ಲಿ, ನಕಲಿ ಬಂದೂಕುಗಳನ್ನು ತಯಾರಿಸಿ ವಿತರಿಸಲಾಗುತ್ತಿದೆ. ಆದರೆ ಪೋಲೀಸರಿಗೆ ಅವುಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ.
ಕೃತ್ಯದ ಬಳಿಕ ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ಮುಖ್ಯಸ್ಥೆ ಡಿ.ಶಿಲ್ಪಾ ಭೇಟಿ ನೀಡಿದರು. ಪತಿ ಮತ್ತು ಪತ್ನಿ ನಡುವಿನ ಜಗಳದ ನಡೆದಿದ್ದು ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾದ ಎಂದು ಡಿ. ಶಿಲ್ಪಾ ಸುದ್ದಿಗಾರರಿಗೆ ತಿಳಿಸಿರುವರು. ಪೋಲೀಸರು ಶ್ವಾನ ತಂಡದೊಂದಿಗೆ ಘಟನಾ ಸ್ಥಳದ ಪರಿಶೀಲನೆ ನಡೆಸಿದರು.
ವಿಧಿವಿಜ್ಞಾನ ತಜ್ಞರು ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು. ಬೆರಳಚ್ಚು ತಜ್ಞರೂ ಆಗಮಿಸಲಿದ್ದಾರೆ.ದಂಪತಿಗಳು ಓರ್ವ ಪುತ್ರನ ಸಹಿತ ಅಪಾರ ಬಂಧುಗಳನ್ನು ಅಗಲಿದ್ದು, ಪುತ್ರ ಅಭಿಲಾಶ್ ಇರಿಯಣ್ಣಿ ಕಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ.