ತಿರುವನಂತಪುರ: ರಾಜ್ಯದ ಶಾಲಾ ಚಟುವಟಿಕೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ನಿಬಂಧನೆಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ 10 ಮತ್ತು 12 ನೇ ತರಗತಿಗಳ ವಿದ್ಯಾರ್ಥಿಗಳ ಶಾಲಾ ಆಗಮನಕ್ಕೆ ಸಂಬಂಧಿಸಿ ಭಾರೀ ರಿಯಾಯಿತಿ ನೀಡಲಾಗಿದೆ.
ಶಾಲೆಗಳು ಪುನರಾರಂಭಗೊಂಡ ನಂತರ ಡಿಡಿಇ / ಆರ್‍ಡಿಡಿ / ಎಡಿ ಯೊಂದಿಗೆ ಇದುವರೆಗೆ ಮಾಡಿದ ಕಾರ್ಯಗಳನ್ನು ಪರಿಶೀಲಿಸಿ ಹೆಚ್ಚಿನ ವಿನಾಯಿತಿಗಳನ್ನು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಪ್ರಕಟಿಸಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ಆಚೀಚೆ ಬದಿಗಳಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ. 100 ಮಂದಿಗಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಎಲ್ಲಾ ಶಾಲೆಗಳಲ್ಲಿ, ಎಲ್ಲಾ ಮಕ್ಕಳು ಏಕಕಾಲದಲ್ಲಿ ಹಾಜರಿರಬೇಕು ಮತ್ತು ಕೋವಿಡ್ ಮಾನದಂಡಕ್ಕೆ ಅನುಗುಣವಾಗಿ ತರಗತಿಯನ್ನು ನಡೆಸಬೇಕು.
100 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳಲ್ಲಿ, ಏಕಕಾಲದಲ್ಲಿ ಗರಿಷ್ಠ ಐವತ್ತು ವಿದ್ಯಾರ್ಥಿಗಳು ಹಾಜರಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಬಹುದು. ಬೆಳಿಗ್ಗೆ ಮತ್ತು ಮಧ್ಯಾಹ್ನ ತರಗತಿಗಳನ್ನು ಏರ್ಪಡಿಸಬೇಕು. ಬೆಳಿಗ್ಗೆ ಬರುವ ಮಕ್ಕಳಿಗೆ ಪ್ರಯಾಣದ ತೊಂದರೆ ಇದ್ದರೆ ಸಂಜೆ ತನಕ ತರಗತಿಯಲ್ಲಿ ಇರಲು ಅವಕಾಶ ನೀಡಬಹುದು.
ಮಕ್ಕಳು ತಮ್ಮ ಆಸನಗಳಲ್ಲಿ ಮನೆಯಿಂದ ತಂದ ಆಹಾರ ಮತ್ತು ನೀರನ್ನು ತಿನ್ನಬಹುದು ಮತ್ತು ಕುಡಿಯಬಹುದು. ಸಾಮಾಜಿಕ ದೂರವನ್ನು ಕಾಪಾಡುವುದು ಅಗತ್ಯವಾಗಿದ್ದು, ಕೈಗಳನ್ನು ಆಗಾಗ್ಗೆ ಸ್ವಚ್ಚಗೊಳಿಸಬೇಕು.
ಶನಿವಾರವೂ ಕೆಲಸದ ದಿನವಾದ್ದರಿಂದ, ಮುಖ್ಯ ಶಿಕ್ಷಕರು ಅಗತ್ಯವಿದ್ದರೆ ಆ ದಿನ ವಿದ್ಯಾರ್ಥಿಗಳ ಸಂಶಯ ನಿವಾರಣೆಗೆ ಶಾಲೆಗೆ ಕರೆಸಬಹುದು. ಇತರ ಕರ್ತವ್ಯಗಳಿಲ್ಲದ ಎಲ್ಲಾ ಶಿಕ್ಷಕರು ಶಾಲೆಗೆ ಹಾಜರಾಗಬೇಕು. ಇಲ್ಲದಿದ್ದರೆ, ಅಂತಹ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.