ನವದೆಹಲಿ: ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ವಿಶ್ವಸಂಸ್ಥೆ ಕೈಗೊಳ್ಳುವ ಪರಿಹಾರ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಭಾರತ ಶೀಘ್ರವೇ ಪಡೆಯಲಿದೆ.
ದೇಶದಲ್ಲಿ ವಿಪತ್ತು ಸಂಭವಿಸಿದಾಗಲೆಲ್ಲಾ ಅಮೋಘ ಸೇವೆ ಸಲ್ಲಿಸಿ ಮೆಚ್ಚುಗೆ ಪಾತ್ರವಾಗಿರುವ ಎನ್‌ಡಿಆರ್‌ಎಫ್‌ಗೆ, ವಿಶ್ವಸಂಸ್ಥೆಯಿಂದ ಮಾನ್ಯತೆ ಸಿಗುತ್ತಿರುವುದೇ ಇದಕ್ಕೆ ಕಾರಣ.
ವಿಪತ್ತು ಸಂಭವಿಸಿದಾಗ ಪರಿಹಾರ ಕೈಗೊಳ್ಳುವ ಕಾರ್ಯಪಡೆಗಳಿಗೆ ಜಾಗತಿಕ ಮಟ್ಟದಲ್ಲಿ ಸ್ವಿಟ್ಜರ್ಲೆಂಡ್ ಮೂಲದ ಇಂಟರ್‌ನ್ಯಾಷನಲ್ ಸರ್ಚ್ ಆಯಂಡ್ ರೆಸ್ಕ್ಯೂ ಅಡ್ವೈಸರಿ ಗ್ರೂಪ್ ಎಂಬ ಸಂಸ್ಥೆ (ಐಎನ್‌ಎಸ್‌ಎಆರ್‌ಎಜಿ) ಅಧಿಕೃತ ದೃಢೀಕರಣ ನೀಡುತ್ತದೆ. 90ಕ್ಕೂ ಅಧಿಕ ದೇಶಗಳು ಹಾಗೂ ಸಂಘಟನೆಗಳು ಈ ಸಂಸ್ಥೆಯ ಸದಸ್ಯತ್ವ ಹೊಂದಿವೆ.
'ಭಾರತದಲ್ಲಿ ಪ್ರಮಾಣೀಕರಣಕ್ಕೆ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಇರುವಂತೆ, ವಿವಿಧ ರೀತಿಯ ವಿಪತ್ತುಗಳ ಸಮಯದಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವ ಸಂಸ್ಥೆಗಳನ್ನು ಐಎನ್‌ಎಸ್‌ಎಆರ್‌ಎಜಿ ಪ್ರಮಾಣೀಕರಿಸುತ್ತದೆ' ಎಂದು ಎನ್‌ಡಿಆರ್‌ಎಫ್‌ನ ಪ್ರಧಾನ ನಿರ್ದೇಶಕ ಎಸ್.ಎನ್.ಪ್ರಧಾನ್ ಹೇಳಿದರು.
'ಐಎನ್‌ಎಸ್‌ಎಆರ್‌ಜಿ ನೀಡುವ ಪ್ರಮಾಣೀಕರಣ ಇದೇ ವರ್ಷ ಸಿಗುವ ವಿಶ್ವಾಸವಿದೆ' ಎಂದೂ ಹೇಳಿದರು.
'ಬೇರೆ ದೇಶಗಳಲ್ಲಿ ಎನ್‌ಡಿಆರ್‌ಎಫ್ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದಲ್ಲ. ಜಪಾನ್, ನೇಪಾಳಗಳಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಎನ್‌ಡಿಆರ್‌ಎಫ್ ತಂಡಗಳು ಅಲ್ಲಿಗೆ ತೆರಳಿ ಪರಿಹಾರ ಕೈಗೊಂಡಿದೆ. ಆ ದೇಶಗಳೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದವೇ ಇದಕ್ಕೆ ಕಾರಣ. ಆದರೆ, ಐಎನ್‌ಎಸ್‌ಎಆರ್‌ಎಜಿ ಮಾನ್ಯತೆ ದೊರೆತರೆ, ವಿಶ್ವಸಂಸ್ಥೆ ಸೂಚಿಸುವ ದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಲು ಸಾಧ್ಯವಾಗಲಿದೆ' ಎಂದು ಪ್ರಧಾನ್ ಹೇಳಿದರು.