ತಿರುವನಂತಪುರ: ರಾಜ್ಯದಲ್ಲಿ ಹಕ್ಕಿಜ್ವರ ಮತ್ತು ಕೋವಿಡ್ ತಡೆಗಟ್ಟುವ ಚಟುವಟಿಕೆಗಳನ್ನು ಮೌಲ್ಯಮಾಪನಗೈಯ್ಯಲು ಆಗಮಿಸಿದ್ದ ಕೇಂದ್ರ ತಂಡ ರಾಜ್ಯದ ವ್ಯವಸ್ಥೆಗಳಿಗೆ ತೃಪ್ತಿ ವ್ಯಕ್ತಪಡಿಸಿತು.
ಕೇರಳ ಉತ್ತಮ ನಿಯಂತ್ರಣ ಕ್ರಮ ಕೈಗೊಂಡಿದೆ. ಕೇರಳ ನಡೆಸಿದ ಕೋವಿಡ್ ರಕ್ಷಣಾ ಚಟುವಟಿಕೆಗಳನ್ನು ಕ್ಷೇತ್ರವಾರು ಮತ್ತು ಕೇಂದ್ರ ಮಟ್ಟದಲ್ಲಿ ಮೌಲ್ಯಮಾಪನ ಮಾಡಲಾಯಿತು. ಇದರ ಆಧಾರದ ಮೇಲೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಕೇಂದ್ರ ತಂಡ ತಿಳಿಸಿದೆ.
ಕೇಂದ್ರ ತಂಡ ಜನವರಿ 7 ರಂದು ಕೇರಳಕ್ಕೆ ಆಗಮಿಸಿತ್ತು. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಕಾರ್ಯದರ್ಶಿ ಮತ್ತು ಕೋವಿಡ್ ನೋಡಲ್ ಅಧಿಕಾರಿ ಮಿನ್ಹಾಜ್ ಆಲಂ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಎಸ್.ಕೆ. ಸಿಂಗ್ ಕೇಂದ್ರ ತಂಡದಲ್ಲಿದ್ದರು. ಅವರು 8 ರಂದು ಕೊಟ್ಟಾಯಂ ಮತ್ತು 9 ರಂದು ಆಲಪ್ಪುಳಕ್ಕೆ ಭೇಟಿ ನೀಡಿ ವಿವಿಧ ನಿಯಂತ್ರಣ ಕ್ರಮಗಳನ್ನು ವೀಕ್ಷಿಸಿದರು. ಕೋವಿಡ್ ಚಟುವಟಿಕೆಗಳ ರಾಜ್ಯ ಮಟ್ಟದ ಮೌಲ್ಯಮಾಪನವನ್ನು ಆರೋಗ್ಯ ನಿರ್ದೇಶನಾಲಯದಲ್ಲಿ ನಡೆಸಲಾಯಿತು.
ರಾಜ್ಯದ ಎಲ್ಲಾ ಪ್ರಮುಖ ಕೋವಿಡ್ ಆಸ್ಪತ್ರೆಗಳ ಮುಖ್ಯಸ್ಥರು ಚರ್ಚೆಯಲ್ಲಿ ಭಾಗವಹಿಸಿ ಕೇರಳದ ಕೋವಿಡ್ ತಡೆಗಟ್ಟುವ ಚಟುವಟಿಕೆಗಳನ್ನು ವೈಜ್ಞಾನಿಕವಾಗಿ ವಿವರಿಸಿದರು.