ನವದೆಹಲಿ: 2021ನೆ ಸಾಲಿನ ಮೊದಲನೆಯ ಹಬ್ಬ ಮಕರ ಸಂಕ್ರಾಂತಿ ಬಂದಿದೆ. ಇಂದು ದೇಶಾದ್ಯಂತ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರು, ಧಾರ್ಮಿಕ ವಿಧಿ-ವಿಧಾನ, ಆಚರಣೆಗಳಿಂದ ಆಚರಿಸಲಾಗುತ್ತದೆ.
ಸಂಕ್ರಾಂತಿ ಸುಗ್ಗಿಯ ಕಾಲ, ಪ್ರಕೃತಿಯಲ್ಲಿ ಬೆಳೆದ ಸಮೃದ್ಧ ಬೆಳೆಗಳನ್ನು, ಫಲ-ಪುಷ್ಪಗಳನ್ನು ತಂದು ದೇವರ ಮುಂದಿಟ್ಟು ಪೂಜೆ ಮಾಡಿ ಮನೆಯವರೆಲ್ಲರೂ ಸೇರಿ ಖುಷಿಯಿಂದ ಹಬ್ಬ ಆಚರಿಸಿ ಹಬ್ಬದಡುಗೆ ಉಣ್ಣುವ ಸಮಯವಿಂದು. ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ. ಎಲ್ಲರ ಮನೆ-ಮನೆಗೂ ಎಳ್ಳು ಬೆಲ್ಲ ಬೀರಿ ಸಂತಸ ಹಂಚಿಕೊಳ್ಳುವ ಸಮಯ. ಕಳೆದ ವರ್ಷದ ಸಂಭ್ರಮಗಳನ್ನು ಕಸಿದುಕೊಂಡಿದ್ದ ಕರೋನ ದೂರವಾಗಿ ಸಂಕ್ರಾಂತಿಯಿಂದ ಎಲ್ಲರ ಬಾಳಲ್ಲೂ ಹೊಸ ಹುರುಪು, ಉತ್ಸಾಹ ಮೂಡಲಿ ಎಂದು ಗಣ್ಯರು, ಸಿನೆಮಾ ತಾರೆಯರು, ರಾಜಕೀಯ ನಾಯಕರು, ಸಾಮಾನ್ಯ ಜನತೆ ಕೂಡ ಆಶಿಸುತ್ತಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಇಂದು ಮುಂಜಾನೆಯಿಂದಲೇ ಭಕ್ತರು ತಮ್ಮದೇ ರೀತಿಯಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ತೊಡಗಿದ್ದಾರೆ. ಕೋಲ್ಕತ್ತಾದ ಹೂಗ್ಲಿ ನದಿ ತೀರದಲ್ಲಿ ಜನರು ಸ್ನಾನ ಮಾಡಿ ಮಡಿಯುಟ್ಟು ಸೂರ್ಯದೇವನಿಗೆ ಅರ್ಘ್ಯ ಅರ್ಪಿಸಿದ್ದು ಕಂಡುಬಂತು.
ತಮಿಳುನಾಡಿನ ಜನತೆಗೆ ಇಂದು ಪೊಂಗಲ್ ವಿಶೇಷ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು ಬೆಳಗ್ಗೆಯೇ ಪೊನ್ನಿಯಮ್ಮನ್ಮೆಡುವಿನ ಶ್ರೀ ಕಡುಂಬಡಿ ಚಿನ್ನಮ್ಮನ್ ದೇವಸ್ಥಾನಕ್ಕೆ ತೆರಳಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಕ್ತರು ಗಂಗಾ ನದಿ ತೀರಕ್ಕೆ ತೆರಳಿ ಪೂಜೆ ಸಲ್ಲಿಸಿದರು.