ನವದೆಹಲಿ: ''ವಾಟ್ಸಾಪ್ ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳನ್ನು ಅಪ್‍ಡೇಟ್ ಮಾಡಿದೆ. ಅಪ್‍ಡೇಟ್ ನಿಮ್ಮ ಮಿತ್ರರು ಅಥವಾ ಕುಟುಂಬದ ಸಂದೇಶಗಳ ಖಾಸಗಿತನಕ್ಕೆ ಯಾವುದೇ ರೀತಿಯಲ್ಲಿ ಬಾಧಕವಲ್ಲ'' ಎಂದು ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದೆ. ಆದರೆ, ಜನವರಿ 15ರಂದು ದೆಹಲಿ ಹೈಕೋರ್ಟಿನಲ್ಲಿ ವಾಟ್ಸಾಪ್ ವಿರುದ್ಧದ ಗೌಪ್ಯತೆ ಹಕ್ಕು ಉಲ್ಲಂಘನೆ ಅರ್ಜಿಯನ್ನು ಪುರಸ್ಕರಿಸಿ, ವಿಚಾರಣೆ ಆರಂಭಿಸಲಾಗಿದೆ.
ಖಾಸಗಿತನ ಅಥವಾ ಗೌಪ್ಯತೆ ನೀತಿಯನ್ನು ವಾಟ್ಸಾಪ್ ಸಂಸ್ಥೆ ಉಲ್ಲಂಘಿಸಿದೆ ಎಂದು ಸಂಸ್ಥೆ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಾಗಿ ಕೋರ್ಟ್ ಪರಿಗಣಿಸಿದೆ.
ವಾಟ್ಸಾಪ್ ಹೊಸ ಅಪ್ಡೇಟ್ ಖಾಸಗಿ ನೀತಿಯನ್ನು ಪ್ರಶ್ನಿಸಿ ವಕೀಲ ಚೈತನ್ಯ ರೊಹಿಲ್ಲಾ ಸಲ್ಲಿಸಿರುವ ಅರ್ಜಿಯಲ್ಲಿ ಫೇಸ್ಬುಕ್ ಒಡೆತನದ ವಾಟ್ಸಾಪ್ ಯಾವ ಹಂತಕ್ಕೆ ಬಳಕೆದಾರರ ಮಾಹಿತಿಯನ್ನು ಪಡೆದುಕೊಂಡು ಫೇಸ್ಬುಕ್ ಗೆ ನೀಡಲಿದೆ ಎಂಬುದು ಪಾರದರ್ಶಕವಾಗಿಲ್ಲ, ವ್ಯಕ್ತಿಯೊಬ್ಬರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುವುದು ಸರ್ಕಾರದ ನೀತಿ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ವ್ಯಕ್ತಿಯ ಆನ್‌ಲೈನ್ ಚಟುವಟಿಕೆಯಲ್ಲಿ ಸಂಪೂರ್ಣ ಪ್ರೊಫೈಲ್ 360 ಡಿಗ್ರಿ ಅನ್ನು ಬಹಿರಂಗಗೊಳಿಸಲಿರುವ ವಾಟ್ಸಾಪ್ ಇದಕ್ಕಾಗಿ ರೂಪಿಸಿಕೊಂಡಿರುವ ನೀತಿ ಬಗ್ಗೆ ಸರಿಯಾದ ಸ್ಪಷ್ಟನೆ ನೀಡಬೇಕಿದೆ ಎಂದಿದ್ದಾರೆ.
ಸುಧಾರಿತ ಗೌಪ್ಯತೆ ನೀತಿಯು ಬಳಕೆದಾರರು ತಮ್ಮ ದತ್ತಾಂಶವನ್ನು ಫೇಸ್‌ಬುಕ್ ಒಡೆತನದ ಇತರೆ ಅಪ್ಲಿಕೇಶನ್‌ಗಳು ಮತ್ತು ತೃತೀಯ ಅಪ್ಲಿಕೇಶನ್‌ಗಳೊಂದಿಗೆ ಹಂಚಿಕೊಳ್ಳದಿರುವ "ಆಯ್ಕೆಯನ್ನುಕಸಿದುಕೊಳ್ಳುತ್ತದೆ" ಎಂಬುದು ಅರ್ಜಿದಾರರ ಕಳವಳವಾಗಿದೆ. ದತ್ತಾಂಶವನ್ನು ಎಷ್ಟರಮಟ್ಟಿಗೆ ಹಂಚಿಕೊಳ್ಳಲಾಗುವುದು ಮತ್ತು ಬಳಕೆದಾರರ ಸೂಕ್ಷ್ಮ ದತ್ತಾಂಶದೊಂದಿಗೆ ಏನು ಮಾಡಲಾಗುವುದು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ವಿವರಿಸಲಾಗಿದೆ.
ಆದರೆ, ಫೇಸ್ಬುಕ್ ಜೊತೆಗೆ ಮಾತ್ರ ಮಾಹಿತಿ ಹಂಚಿಕೊಳ್ಳಲಾಗುತ್ತಿದ್ದು, ಹಂಚಿಕೊಳ್ಳುವ ಮುನ್ನ ಬಳಕೆದಾರರು ಇಚ್ಛಿಸಿದರೆ ಮಾತ್ರ ಇದು ಸಾಧ್ಯ ಎಂದು ವಾಟ್ಸಾ ಸಮಜಾಯಿಷಿ ನೀಡಿದೆ.